ಭಾರತದ ಬಹುದಿನದ ಬೇಡಿಕೆಗೆ ಮಣಿದಿರುವ ಸ್ವಿಸ್ ಸರ್ಕಾರ, ಸ್ವಿಸ್ ಬ್ಯಾಂಕುಗಳಲ್ಲಿ ಠೇವಣಿ ಹೂಡಿರುವ ಭಾರತೀಯರ ಕಪ್ಪುಹಣ ಬಹಿರಂಗಪಡಿಸಲು ಒಪ್ಪಿದೆ. ತೆರಿಗೆ ವಂಚನೆಯನ್ನು ಕೂಡ ಸೇರಿಸಲು ದ್ವಿತೆರಿಗೆ ಒಪ್ಪಂದವನ್ನು ನಾವು ತಿದ್ದುಪಡಿ ಮಾಡುತ್ತೇವೆಂದು ಭಾರತಕ್ಕೆ ಸ್ವಿಸ್ ರಾಯಭಾರಿ ಫಿಲಿಪ್ ವೆಲ್ಟಿ ತಿಳಿಸಿದ್ದಾರೆ.
ಈ ಕ್ರಮದಿಂದಾಗಿ ತೆರಿಗೆಗಳ್ಳರ ಖಾತೆಯ ತಪಾಸಣೆಗೆ ಅವಕಾಶ ಸಿಕ್ಕಿ, ಕಪ್ಪುಹಣದ ಪ್ರವಾಹದ ಬಾಗಿಲು ತೆರೆದುಕೊಳ್ಳುತ್ತದೆಂದು ಭಾವಿಸಲಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೂಡ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣವು ಪ್ರಮುಖ ಚರ್ಚೆಯ ವಿಷಯವಾಗಿತ್ತು.
ಸುಮಾರು 500 ಶತಕೋಟಿ ಡಾಲರ್‌ನಿಂದ 1400 ಶತಕೋಟಿ ಡಾಲರ್ ಭಾರತೀಯರ ಹಣ ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯುತ್ತಿದೆಯೆಂದು ಬಿಜೆಪಿ ಆಪಾದಿಸಿದೆ.