ಲಾಹೋರ್ ಮತ್ತು ಪೇಶಾವರದಲ್ಲಿ ಸರಣಿ ಭಯೋತ್ಪಾದನೆ ದಾಳಿಗಳಿಗೆ ಸಂಬಂಧಪಟ್ಟಂತೆ ಪಾಕಿಸ್ತಾನದ ಪೊಲೀಸರು 6 ಶಂಕಿತರನ್ನು ಬಂಧಿಸಿದ್ದು, ಅವರಲ್ಲಿ ನಾಲ್ವರು ಗುಂಡೇಟಿನ ಗಾಯಗಳಿಂದಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ತೆಹ್ರೀಕ್ ಎ ತಾಲಿಬಾನ್‌ನ ಬಣವಾದ ಅಮ್ಜದ್ ಫರೂಖಿ ಸಮೂಹಕ್ಕೆ ಸೇರಿದ ಇಬ್ಬರು ಉಗ್ರಗಾಮಿಗಳಿಗೆ ಅಲ್ ಖಾಯಿದಾ ಜತೆ ನಿಕಟ ಸಂಪರ್ಕವಿದ್ದು, ನಗರದ ಸೂಪರ್ ಹೈವೇ ಬಳಿಯ ಮನೆಯೊಂದರಿಂದ ಬಂಧಿಸಲಾಗಿದೆಯೆಂದು ಪೊಲೀಸ್ ಮೂಲಗಳು ಹೇಳಿವೆ.ಮನೆಯಿಂದ ಭಾರೀ ಪ್ರಮಾಣದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಲಾಗಿದ್ದು, ಆ ಮನೆಯಲ್ಲಿ ಇಬ್ಬರು ಉಗ್ರಗಾಮಿಗಳು ಅಡಗಿದ್ದರೆಂದು ಅವು ತಿಳಿಸಿವೆ.
ಬಂಧಿತರಾದ ಇಬ್ಬರು ಉಗ್ರಗಾಮಿಗಳ ನೀಡಿದ ಸುಳಿವಿನ ಮೇಲೆ, ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಕರಾಚಿಯ ಗುಲ್ಶನ್-ಎ-ಇಕ್ಬಾಲ್ ಪ್ರದೇಶದಿಂದ ಗುರುವಾರ ರಾತ್ರಿ ನಾಲ್ವರು ಶಂಕಿತರನ್ನು ಗಾಯಗೊಂಡಿದ್ದ ಸ್ಥಿತಿಯಲ್ಲೇ ಕಸ್ಟಡಿಗೆ ತೆಗೆದುಕೊಂಡರೆಂದು ಮೂಲಗಳು ತಿಳಿಸಿವೆ.