ಇಸ್ಲಾಮಾಬಾದ್, ಶುಕ್ರವಾರ, 16 ಅಕ್ಟೋಬರ್ 2009( 12:01 IST )
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸಂಭವನೀಯ ಭಯೋತ್ಪಾದನೆ ದಾಳಿ ತಡೆಯಲು ದ್ವಿಚಕ್ರವಾಹನಗಳ ಹಿಂಬದಿ ಸವಾರಿಯನ್ನು ನಿಷೇಧಿಸಲಾಗಿದೆಯೆಂದು ಮಾಧ್ಯಮದ ವರದಿ ತಿಳಿಸಿದೆ. ಭಯೋತ್ಪಾದನೆ ದಾಳಿಗಳಿಂದ ತೀವ್ರ ಕಳವಳಗೊಂಡಿರುವ ಹಿನ್ನೆಲೆಯಲ್ಲಿ ಹಿಂಬದಿ ಸವಾರಿಯನ್ನು ನಿಷೇಧಿಸಿ ಒಳಾಡಳಿತ ಸಚಿವ ರೆಹ್ಮಾನ್ ಮಲಿಕ್ ಆದೇಶ ನೀಡಿದ್ದಾರೆಂದು ಮೂಲಗಳನ್ನು ಉದ್ದೇಶಿಸಿ ಜಿಯೊ ಟಿವಿ ವರದಿ ಮಾಡಿದೆ.
ಬಿಗಿ ಭದ್ರತೆಯ ಕೆಂಪು ವಲಯ ಪ್ರದೇಶದಲ್ಲಿರುವ ಮತ್ತು ಇಸ್ಲಾಮಾಬಾದ್ ಪ್ರವೇಶಗಳ ವ್ಯಾಪ್ತಿಯಲ್ಲಿರುವ ಎಲ್ಲ ವಾಹನಗಳನ್ನು ತಪಾಸಣೆಗೆ ಒಳಪಡಿಸುವಂತೆ ಮಲಿಕ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈ ತಿಂಗಳಾರಂಭದಿಂದ ರಾಷ್ಟ್ರದಲ್ಲಿ ಭಯೋತ್ಪಾದನೆ ದಾಳಿಗಳು ಸತತವಾಗಿ ಘಟಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ತಾಲಿಬಾನ್ ಲಾಹೋರ್ ನಗರದ ಮೂರು ಪೊಲೀಸ್ ಸಂಸ್ಥೆಗಳ ಮೇಲೆ ಏಕಕಾಲದಲ್ಲಿ ಭೀಕರ ದಾಳಿ ನಡೆಸಿದ್ದರಿಂದ ಪಾಕಿಸ್ತಾನ ಸೇಡು ತೀರಿಸಿಕೊಳ್ಳುವುದಾಗಿ ಗುರುವಾರ ಪ್ರತಿಜ್ಞೆ ತೊಟ್ಟಿದೆ. ಭಯೋತ್ಪಾದಕರ ಸರಣಿ ದಾಳಿಗಳಲ್ಲಿ ರಕ್ತದೋಕುಳಿಯೇ ಹರಿದಿದ್ದು 42 ಜನರು ಪ್ರಾಣಕಳೆದುಕೊಂಡಿದ್ದಾರೆ. ಕಳೆದ ಅಕ್ಟೋಬರ್ 10ರಂದು ಇಸ್ಲಾಮಾಬಾದ್‌ಗೆ ನೆರೆಯಲ್ಲಿರುವ ರಾವಲ್ಪಿಂಡಿಯ ಪಾಕಿಸ್ತಾನ ಸೇನೆ ಮುಖ್ಯಕಚೇರಿಗೆ ಮುತ್ತಿಗೆ ಹಾಕಿದ ಭಯೋತ್ಪಾದಕರು 42 ಅಧಿಕಾರಿಗಳನ್ನು ಮತ್ತು ಸೈನಿಕರನ್ನು ಒತ್ತೆಯಿರಿಸಿಕೊಂಡರು.
ಭದ್ರತಾಪಡೆ ಮತ್ತು ಉಗ್ರಗಾಮಿಗಳ ಜೆತ ಎರಡು ದಿನಗಳವರೆಗೆ ಗುಂಡಿನ ಚಕಮಕಿ ನಡೆದು ಬ್ರಿಗೇಡಿಯರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಸೇರಿದಂತೆ 19 ಜನರು ಬಲಿಯಾಗಿದ್ದರು.ಅದಕ್ಕೆ ಮುಂಚಿತವಾಗಿ ಒಂದು ದಿನದ ಮುಂಚೆ, ಆತ್ಮಾಹುತಿ ಮಾನವ ಬಾಂಬ್ ಸ್ಫೋಟಕಗಳಿಂದ ತುಂಬಿದ್ದ ಕಾರನ್ನು ಪೇಶಾವರದ ಜನನಿಬಿಡ ಮಾರುಕಟ್ಟೆಯಲ್ಲಿ ಸ್ಫೋಟಿಸಿದ್ದರಿಂದ 53 ಜನರು ಬಲಿಯಾಗಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕಳೆದ ಅಕ್ಟೋಬರ್ 5 ರಂದು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮ ಕಚೇರಿಯಲ್ಲಿ ಆತ್ಮಾಹುತಿ ಬಾಂಬರ್ ಸ್ವತಃ ಸ್ಫೋಟಿಸಿಕೊಂಡು ಐವರು ಬಲಿಯಾಗಿದ್ದರು.
ತಾಲಿಬಾನ್ ಮುಖಂಡ ಬೈತುಲ್ಲಾ ಮಸೂದ್ ಡ್ರೋನ್ ದಾಳಿಗೆ ಬಲಿಯಾದ ಬಳಿಕ ಮತ್ತೆ ಚೇತರಿಸಿಕೊಂಡ ತಾಲಿಬಾನ್ ಪುನರ್‌ಸಂಘಟಿತರಾಗಿ ಮೇಲಿಂದ ಮೇಲೆ ದಾಳಿ ನಡೆಸುವ ಮೂಲಕ ಭೀತಿಯ ವಾತಾವರಣ ಸೃಷ್ಟಿಸಿದೆ.