ಇಸ್ಲಾಮಾಬಾದ್, ಶುಕ್ರವಾರ, 16 ಅಕ್ಟೋಬರ್ 2009( 13:26 IST )
ಪಾಕಿಸ್ತಾನದಲ್ಲಿ ಗುರುವಾರ ಮೂರು ಭದ್ರತಾ ಸಂಸ್ಥೆಗಳಿಗೆ ನುಗ್ಗಿ ಭೀಕರ ಗುಂಡಿನ ಚಕಮಕಿ ನಡೆಸಿದ ತಾಲಿಬಾನಿಗಳು ಮಾರಣಹೋಮ ಸೃಷ್ಟಿಸಿದ ಬಳಿಕ ಮತ್ತೊಮ್ಮೆ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಈ ದಾಳಿಯಲ್ಲಿ 13 ಜನರು ಅಸುನೀಗಿದ್ದಾರೆ.
ಪೇಶಾವರದ ದಂಡುಪ್ರದೇಶದಲ್ಲಿ ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ಕಾರೊಂದನ್ನು ಸಿಐಎ ಪೊಲೀಸ್ ಠಾಣೆಯೊಳಕ್ಕೆ ನುಗ್ಗಿಸಲು ಯತ್ನಿಸಿದಾಗ ಭದ್ರತಾಪಡೆಗಳು ತಡೆದ ಕೂಡಲೇ ಭಾರೀ ಸ್ಫೋಟ ಸಂಭವಿಸಿತೆಂದು ವರದಿಯಾಗಿದೆ.
ಮಧ್ಯಾಹ್ನ 12.55 ಸ್ಥಳೀಯ ಕಾಲಮಾನದಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಸತ್ತವರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಕೂಡ ಸೇರಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 6 ಮಂದಿ ಪೊಲೀಸ್ ಅಧಿಕಾರಿಗಳಾಗಿದ್ದು, ಗಾಯಗೊಂಡ ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಕಳೆದ 24 ಗಂಟೆಗಳಲ್ಲಿ ಪೇಶಾವರದಲ್ಲಿ ನಡೆಯುತ್ತಿರುವ ಎರಡನೇ ದಾಳಿಯೆಂದು ವರದಿಯಾಗಿದೆ.
ಪೇಶಾವರದ ದಾಳಿಯ ಹಿನ್ನೆಲೆಯಲ್ಲಿ ನಾಲ್ಕು ಪ್ರಾಂತ್ಯಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಗಾಯಾಳುಗಳು ದಾಖಲಾದ ಆಸ್ಪತ್ರೆಯಲ್ಲಿ ಸಹ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಹೆಲಿಕಾಪ್ಟರುಗಳು ಭಯೋತ್ಪಾದಕರಿಗಾಗಿ ತೀವ್ರ ಶೋಧ ನಡೆಸಿವೆ.