ಮೆಲ್ಬೋರ್ನ್, ಶುಕ್ರವಾರ, 16 ಅಕ್ಟೋಬರ್ 2009( 19:02 IST )
ರೈಲುಹಳಿಗಳ ಮೇಲೆ ಉರುಳಿಬಿದ್ದ ಮಗುವಿಗೆ ರೈಲು ಡಿಕ್ಕಿಹೊಡೆದರೂ ಪವಾಡಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಆಸ್ಟ್ರೇಲಿಯದ ಮೆಲ್ಬೋರ್ನ್‌ನಲ್ಲಿ ವರದಿಯಾಗಿದೆ. 6 ತಿಂಗಳ ಮಗು ಸ್ಟ್ರಾಲರ್‌ನಲ್ಲಿದ್ದಾಗ ಮಗುವಿನ ತಾಯಿ ಮೊಬೈಲ್ ಸಂಭಾಷಣೆಯಲ್ಲಿ ಮುಳುಗಿದ್ದಾಗ ಇದ್ದಕ್ಕಿದ್ದಂತೆ ಮಗುವು ಮಲಗಿದ್ದ ಸ್ಟ್ರಾಲರ್ ಪ್ಲಾಟ್‌ಫಾರಂನಿಂದ ಉರುಳಿ ರೈಲ್ವೆಹಳಿಗಳ ಮೇಲೆ ಬಿತ್ತೆಂದು ವರದಿಯಾಗಿದೆ.
ಅಷ್ಟರಲ್ಲಿ ಆಗಮಿಸಿದ ರೈಲು ಸ್ಟ್ರಾಲರ್‌ಗೆ ಡಿಕ್ಕಿ ಹೊಡೆದು ಅದನ್ನು 35 ಮೀಟರ್ ದೂರದವರೆಗೆ ಎಳೆದುಕೊಂಡು ಹೋಯಿತು. ಮಗುವಿಗೆ ಹಣೆಯಲ್ಲಿ ಸಣ್ಣ ಗಾಯವಾಗಿದ್ದನ್ನು ಹೊರತುಪಡಿಸಿ ಪವಾಡಸದೃಶ ರೀತಿಯಲ್ಲಿ ಪಾರಾಗಿದೆ. ಭದ್ರತಾ ವಿಡಿಯೊ ಚಿತ್ರವನ್ನು ಬಿಡುಗಡೆ ಮಾಡಲಾಗಿದ್ದು, ಈ ಚಿತ್ರದಲ್ಲಿ ಸ್ಟ್ರಾಲರ್ ಫ್ಲಾಟ್‌ಫಾಂ ತುದಿಯಿಂದ ಹಳಿಗಳ ಮೇಲೆ ಬಿದ್ದಿದ್ದು ಗೋಚರಿಸಿದೆ.
ತಾಯಿ ಭೀತಿಯಿಂದ ಹಿಂದೆನೋಡಿ ಸ್ಟ್ರಾಲರ್‌ಗೆ ಆಗತಾನೇ ಆಗಮಿಸಿದ ರೈಲು ಡಿಕ್ಕಿಹೊಡೆದಿದ್ದನ್ನು ಕಂಡರು. ಗಂಡುಮಗು ಸಣ್ಣಪುಟ್ಟ ಗಾಯಗಳಿಂದ ಬದುಕುಳಿದಿದೆ.
ಪ್ರಾಮ್ ಹಳಿಯ ಮೇಲೆ ಬಿದ್ದ ಕೂಡಲೇ ರೈಲಿನ ಚಾಲಕ ಬಲವಾಗಿ ಬ್ರೇಕ್ ಹಾಕಿದ್ದರಿಂದ ಮತ್ತು ರೈಲು ನಿಲ್ದಾಣ ಸಮೀಪಿಸುತ್ತಿದ್ದಂತೆ ನಿಧಾನಗತಿಯಲ್ಲಿದ್ದರಿಂದ ಮಗುವಿನ ಪ್ರಾಣ ಉಳಿಯಿತೆಂದು ವರದಿಯಾಗಿದೆ. ಮಗುವನ್ನು ಪ್ರಾಮ್‌ಗೆ ಬಿಗಿದಿದ್ದರಿಂದ ಮಗು ಅಪಾಯದಿಂದ ಅದೃಷ್ಟವಶಾತ್ ಪಾರಾಗಿದೆಯೆಂದು ವೈದ್ಯರು ಹೇಳಿಕೆಯಲ್ಲಿ ತಿಳಿಸಿದ್ದಾರೆ.