ಆಸ್ಟ್ರೇಲಿಯ ನಗರದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಅವರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಲಾಗಿದೆಯೆಂದು ಮಾಧ್ಯಮ ವರದಿ ಶನಿವಾರ ತಿಳಿಸಿದೆ. ಮೆಲ್ಬೋರ್ನ್ ರೈಲ್ವೆ ನಿಲ್ದಾಣಗಳ ಸುತ್ತಮುತ್ತಲಲ್ಲಿ ಮೂವರು ಯುವಕರು ಗುರುವಾರ ರಾತ್ರಿ ಮನೆಗೆ ಹಿಂತಿರುಗುತ್ತಿದ್ದಾಗ ಅವರನ್ನು ಲೂಟಿ ಮಾಡಿ ಥಳಿಸಲಾಗಿದೆಯೆಂದು ಏಜ್ ವರದಿ ಮಾಡಿದೆ.
ಸನ್ಶೈನ್ ನಿಲ್ದಾಣದಿಂದ ರಾತ್ರಿ 10.30ರಲ್ಲಿ ಆಂಡರ್ಸನ್ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಲಾಗಿದೆ. ಡರ್ಬಿ ರೋಡ್ ರಿಸರ್ವ್ ಬಳಿ ನಾಲ್ಕರಿಂದ 6 ಮಂದಿ ವ್ಯಕ್ತಿಗಳು ವಿದ್ಯಾರ್ಥಿಗಳನ್ನು ಸಂಧಿಸಿ ಅವರ ಪರ್ಸ್ ಮತ್ತು ಮೊಬೈಲ್ಗಳನ್ನು ನೀಡುವಂತೆ ಬೆದರಿಸಿದರೆಂದು ಪೊಲೀಸರು ತಿಳಿಸಿದ್ದಾರೆ. 26 ವರ್ಷದ ವಿದ್ಯಾರ್ಥಿಯೊಬ್ಬ ಎರಡು ಮೊಬೈಲ್ಗಳನ್ನು ಹಸ್ತಾಂತರಿಸಿ ಅಲ್ಲಿಂದ ಕಾಲ್ಕಿತ್ತ.
ಇನ್ನುಳಿದ ವಿದ್ಯಾರ್ಥಿಗಳಿಗೆ ದುಷ್ಕರ್ಮಿಗಳು ಥಳಿಸಿ ಮೊಬೈಲ್ಗಳನ್ನು ಕಿತ್ತುಕೊಂಡರು ಎಂದು ಮಾಧ್ಯಮದ ವರದಿ ತಿಳಿಸಿದೆ. ಈ ಘಟನೆಯಲ್ಲಿ 24ರ ಪ್ರಾಯದ ವಿದ್ಯಾರ್ಥಿ ತಲೆಗೆ ಗಾಯವಾಗಿದ್ದು, 27ರ ಪ್ರಾಯದ ವಿದ್ಯಾರ್ಥಿಗೆ ದೇಹದ ಮೇಲ್ಭಾಗದಲ್ಲಿ ಊದಿಕೊಂಡಿದೆ.