ಶಾರ್ಜಾ ವಿಮಾನನಿಲ್ದಾಣದಿಂದ ಹೊರಟ ಕೂಡಲೇ ಸರಕುಸಾಗಣೆ ವಿಮಾನವೊಂದು ಬುಧವಾರ ಅಪಘಾತಕ್ಕೀಡಾಗಿ 6 ಜನರು ಮೃತಪಟ್ಟಿದ್ದಾರೆ. ಶಾರ್ಜಾ ವಿಮಾನನಿಲ್ದಾಣದಿಂದ ಖಾರ್ಟೊಮ್‌ಗೆ ತೆರಳುತ್ತಿದ್ದ ಬೋಯಿಂಗ್ 707 ವಿಮಾನ ಎರಡು ಕಿಮೀ ದೂರ ಸಾಗುವಷ್ಟರಲ್ಲೇ ಅಪಘಾತಕ್ಕೀಡಾಯಿತು. ಸೂಡಾನ್ ದೇಶಕ್ಕೆ ಸೇರಿದ ವಿಮಾನವನ್ನು ಪ್ರತ್ಯೇಕ ಸೂಡಾನ್ ಕಂಪೆನಿ ಅಜಾ ಟ್ರಾನ್ಸ್‌ಪೋರ್ಟ್ ನಿರ್ವಹಿಸುತ್ತಿತ್ತು.
ವಿಮಾನ ಅಪಘಾತಕ್ಕೀಡಾದ ಕೂಡಲೇ ಬೆಂಕಿ ಆವರಿಸಿದ್ದರಿಂದ 6 ಸಿಬ್ಬಂದಿ ಜೀವಂತ ದಹಿಸಿದ್ದಾರೆಂದು ಶಾರ್ಜಾ ಪೊಲೀಸ್ ಮಹಾನಿರ್ದೇಶಕ ದೃಢಪಡಿಸಿದ್ದಾರೆ.ವಿಮಾನದ ಪೈಲಟ್ ಕ್ಯಾ.ಮೊಹಮದ್ ಅಲಿ, ಅವರ ಸೋದರ ಮೊಹಮದ್ ಉತ್ಮಾನ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
6 ಗಂಟೆಗಳಿಗೆ ಸಾಕಾಗುವಷ್ಟು 15ರಿಂದ 20 ಟನ್ ಇಂಧನವನ್ನು ವಿಮಾನ ಹೊತ್ತೊಯ್ಯುತ್ತಿದ್ದು, ಅಪಘಾತದ ಬಳಿಕ ಇಂಧನದಿಂದ ಭಾರೀ ಬೆಂಕಿ ಆವರಿಸಿತೆಂದು ಸೂಡಾನ್ ಏರ್‌ವೇಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಹಿಂದೆ 2004ರಲ್ಲಿ ಶಾರ್ಜಾದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 40 ಜನರು ಬಲಿಯಾಗಿದ್ದರು.