ರಷ್ಯಾ ಜತೆ ಸುದೀರ್ಘ ಕಾಲೀನ ಸಂಬಂಧವು ಭಾರತ ವಿದೇಶಾಂಗ ನೀತಿಯ ಉನ್ನತ ಆದ್ಯತೆಯಾಗಿದೆಯೆಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಬುಧವಾರ ತಿಳಿಸಿದ್ದಾರೆ. ರಷ್ಯಾಗೆ ಭೇಟಿ ನೀಡಿರುವ ಎಸ್.ಎಂ. ಕೃಷ್ಣ ಅವರು ರಷ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಜತೆ ಆಫ್ಘಾನಿಸ್ತಾನ ಸೇರಿದಂತೆ ದ್ವಿಪಕ್ಷೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳನ್ನು ಕುರಿತು ವ್ಯಾಪಕ ಚರ್ಚೆ ನಡೆಸಿದರು.
ರಷ್ಯಾ ಜತೆ ಸುದೀರ್ಘ ಕಾಲೀನ ಸಂಬಂಧವು ಅನೇಕ ಬಿರುಗಾಳಿಗಳನ್ನು ಎದುರಿಸಿ ಬಲಿಷ್ಠವಾಗಿದೆ ಎಂದು ಹೇಳಿದ ಕೃಷ್ಣ, ರಷ್ಯಾ ಜತೆ ಸಂಬಂಧವು ವಿದೇಶಾಂಗ ನೀತಿಯ ಉನ್ನತ ಆದ್ಯತೆಯಾಗಲಿದೆ ಎಂದು ಹೇಳಿದರು.ಮೆಡ್ವೆಡೆವ್ ಜತೆ ವ್ಯಾಪಕ 40 ನಿಮಿಷಗಳ ಮಾತುಕತೆ ಬಳಿಕ ಕೃಷ್ಣ ವರದಿಗಾರರ ಜತೆ ಮಾತನಾಡುತ್ತಿದ್ದರು.ಮೆಡ್ವೆಡೇವ್ ಜತೆ ಭೇಟಿ ಕಾಲದಲ್ಲಿ ಎಲ್ಲ ವಿಷಯಗಳ ಬಗ್ಗೆ ನಾವು ಸಮಾನ ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ಕೃಷ್ಣ ಹೇಳಿದರು.
ಭೇಟಿಯ ಕಾಲದಲ್ಲಿ ಸ್ವಾತಂತ್ರನಂತರದ ಆರಂಭದ ವರ್ಷಗಳಲ್ಲಿ ಭಾರತಕ್ಕೆ ರಷ್ಯಾ ನೆರವನ್ನು ಸ್ಮರಿಸಿಕೊಂಡರು.ಭಯೋತ್ಪಾದನೆ, ಮಾದಕವಸ್ತು ಅಪರಾಧ ಮತ್ತು ಸಂಘಟಿತ ಅಪರಾಧ ಸೇರಿದಂತೆ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪ್ರಸಕ್ತ ಬೆದರಿಕೆಗಳ ವಿರುದ್ಧ ಜಂಟಿ ಕೆಲಸದಲ್ಲಿ ಉಭಯ ರಾಷ್ಟ್ರಗಳು ಸಹಕರಿಸಿದ್ದಾಗಿ ಮೆಡ್ವಡೆವ್ ತಿಳಿಸಿದರು.
ಭಾರತ ಮತ್ತು ರಷ್ಯಾ 2015ರೊಳಗೆ ದ್ವಿಪಕ್ಷೀಯ ವಹಿವಾಟನ್ನು 20 ಶತಕೋಟಿ ಡಾಲರ್‌ಗೆ ಉತ್ತೇಜಿಸಲಿದೆಯೆಂದು ಅವರು ಹೇಳಿದರು. ಜೂನ್‌ನಲ್ಲಿ ಯೆಕಾಟೆರಿನ್‌ಬರ್ಗ್‌ಗೆ ಪ್ರಧಾನಿ ಭೇಟಿ ಮತ್ತು ಸೆಪ್ಟೆಂಬರ್‌ನಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಭೇಟಿ ಸೇರಿದಂತೆ ಉನ್ನತ ಮಟ್ಟದ ಭೇಟಿಗಳ ವಿನಿಮಯ ನಡೆಯಲಿದೆಯೆಂದು ಕೃಷ್ಣ ಹೇಳಿದರು. ತಮ್ಮ ಭೇಟಿಯ ಪ್ರಾಮುಖ್ಯತೆ ಕುರಿತು ಪ್ರಶ್ನಿಸಿದ ಟೀಕಾಕಾರರಿಗೆ ಇದು ಉತ್ತರವಾಗಲಿದೆಯೆಂದು ಕೃಷ್ಣ ಹೇಳಿದರು.