ಇಸ್ಲಾಮಾಬಾದ್, ಗುರುವಾರ, 22 ಅಕ್ಟೋಬರ್ 2009( 16:11 IST )
ND
ಭಾರತವು ಪ್ರತೀ ಮೂರು ತಿಂಗಳಿಗೊಮ್ಮೆ ಪಾಕ್ ಮೇಲೆ ದಾಳಿ ನಡೆಸುವ 'ಬೆದರಿಕೆ' ಒಡ್ಡುತ್ತಿದೆ. ಆದರೆ, ಒಂದು ಅಣ್ವಸ್ತ್ರ ಶಕ್ತ ರಾಷ್ಟ್ರವಾಗಿ ನಾವೇನೂ ದುರ್ಬಲರಲ್ಲ, ಹೇಗೆ ತಿರುಗಿಬೀಳಬೇಕೆಂದು ನಮಗೆ ಗೊತ್ತಿದೆ ಎಂದು ಪಾಕಿಸ್ತಾನ ಭಾರತಕ್ಕೆ ಎಚ್ಚರಿಕೆ ನೀಡುವ ಮೂಲಕ, ತನ್ನ ಉದ್ಧಟತನ ಮುಂದುವರಿಸಿದೆ.
ಅಡಿಗೆ ಬಿದ್ದರೂ ಮೂಗು ಮೇಲೆ ಎಂಬಂತೆ ಕಾಲಕಾಲಕ್ಕೆ ಈ ರೀತಿಯ ತಲೆಬುಡವಿಲ್ಲದ ಹೇಳಿಕೆಗಳನ್ನು ನೀಡುತ್ತಲೇ ಇರುವ ಪಾಕಿಸ್ತಾನ, ಇದೀಗ ಮತ್ತೊಮ್ಮೆ ತನ್ನ ಸಡಿಲ ನಾಲಿಗೆಯನ್ನು ಹೊರ ಚಾಚಿದ್ದು, 26/11ರ ಮುಂಬೈ ದಾಳಿಯನ್ನೇ ಹೋಲುವ ದಾಳಿ ನಡೆಯುತ್ತದೆ ಎಂಬ ಕುರಿತು ಭಾರತ ತನ್ನ ಬಳಿ ಸಾಕ್ಷ್ಯಾಧಾರವಿದ್ದರೆ ಕೊಡಲಿ. ಸುಮ್ಮನೆ ಹೆದರಿಸುವುದು ಅನಗತ್ಯ. ಇದರಲ್ಲಿ ನಮ್ಮ ದೇಶದ ಪ್ರಜೆಗಳೇನಾದರೂ ಭಾಗಿಯಾಗುತ್ತಾರೆಂದಾದರೆ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಪಾಕ್ ಒಳಾಡಳಿತ ಸಚಿವ ರಹಮಾನ್ ಮಲಿಕ್ ಹೇಳಿದ್ದಾರೆ.
ಮುಂಬೈ ಮಾದರಿಯಲ್ಲಿ ಮತ್ತಷ್ಟು ದಾಳಿಗಳು ನಡೆಯುತ್ತವೆಯೆಂದಾದರೆ, ಈ ಕುರಿತ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕು. ಇದರ ಬಗ್ಗೆ ಪರಿಶೀಲಿಸಿ ಕೇವಲ 48 ಗಂಟೆಗಳೊಳಗೆ ತಕ್ಕ ಕ್ರಮ ಕೈಗೊಳ್ಳುತ್ತೇವೆ. ಆದರೆ, ಭಾರತವು ಮಾಹಿತಿ ಹಂಚಿಕೊಳ್ಳದಿದ್ದರೆ ಏನೇ ಸಂಭವಿಸಿದರೂ ಅವರೇ ಹೊಣೆಗಾರರು ಎಂದು ತಾನು ಪ್ರಧಾನಿ ಮನಮೋಹನ್ ಸಿಂಗ್‌ಗೆ ಹೇಳಿರುವುದಾಗಿ ಮಲಿಕ್ ತಿಳಿಸಿದ್ದಾರೆ.
ಮುಂಬೈ ದಾಳಿಯ ಸಾಕ್ಷ್ಯಾಧಾರಗಳ ಮಹಾಪೂರವನ್ನೇ ಪಾಕಿಸ್ತಾನಕ್ಕೆ ಕೊಟ್ಟರೂ ಇಷ್ಟು ದಿನಗಳಾದರೂ ಈ ದಾಳಿಯ ಪ್ರಧಾನ ಆರೋಪಿ ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಮೇಲೆ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿರುವ ಪಾಕಿಸ್ತಾನ ಯಾವ ರೀತಿ 'ತಕ್ಕ ಕ್ರಮ' ಕೈಗೊಳ್ಳುತ್ತದೆ ಎಂಬುದು ಜಗತ್ತಿನ ಕಣ್ಣಮುಂದಿರುವುದು ಬಹುಶಃ ಮಲಿಕ್‌ಗೆ ತಿಳಿದಿಲ್ಲವೆಂದು ತೋರುತ್ತದೆ.
ವಿಶ್ವಸಂಸ್ಥೆ, ಅಮೆರಿಕ ಮತ್ತು ಭಾರತದ ಒತ್ತಡದ ಬಳಿಕ ಸಯೀದ್‌ನನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ಗೃಹಬಂಧನದಲ್ಲಿಟ್ಟಿದ್ದ ಪಾಕಿಸ್ತಾನ, ಆ ಬಳಿಕ ಸಾಕ್ಷ್ಯಾಧಾರವಿಲ್ಲ ಎಂದು ಆತನನ್ನು ಕಳೆದ ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಆತನ ವಿರುದ್ಧದ ದೂರಿನ ವಿಚಾರಣೆಯನ್ನು ಅಲ್ಲಿನ ಸುಪ್ರೀಂಕೋರ್ಟ್ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಆ ಬಳಿಕ ಸಯೀದ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ಎರಡು ಕೇಸುಗಳನ್ನು ದಾಖಲಿಸಲಾಗಿತ್ತು. ಇದನ್ನು ಕೂಡ ಲಾಹೋರ್ ಹೈಕೋರ್ಟ್ ತಳ್ಳಿ ಹಾಕಿ, ಜಮಾತ್ ಉದ್ ದಾವಾ (ಲಷ್ಕರ್‌ನ ಮತ್ತೊಂದು ರೂಪ, ಅದಕ್ಕೆ ಸಯೀದ್ ಮುಖ್ಯಸ್ಥ) ಎಂಬ ಉಗ್ರವಾದಿ ಸಂಘಟನೆಯನ್ನು ವಿಶ್ವಸಂಸ್ಥೆ ನಿಷೇಧಿಸಿರಬಹುದು, ಆದರೆ ಪಾಕಿಸ್ತಾನ ಸರಕಾರ ನಿಷೇಧಿಸಿಲ್ಲವಲ್ಲ ಎಂದು ಹೇಳಿ ಕೇಸು ವಜಾ ಮಾಡಿತ್ತು.
ಮುಂಬೈಯಲ್ಲಿ ವಿದೇಶೀಯರೂ ಸೇರಿದಂತೆ 170 ಮಂದಿಯ ಮಾರಣಹೋಮಕ್ಕೆ ಕಾರಣವಾದ 26-11-2008ರಂದು ನಡೆದ ದಾಳಿಯಲ್ಲಿ ಸಯೀದ್ ಮತ್ತು ಇತರ ಪಾಕಿಸ್ತಾನೀಯರ ಕೈವಾಡದ ಕುರಿತಾಗಿ ಭಾರತವು ಆರು ಬಾರಿ ದಾಖಲೆಗಳ ಸಂಪುಟವನ್ನು ಪಾಕಿಸ್ತಾನಕ್ಕೆ ಒಪ್ಪಿಸಿತ್ತು.
ಲಷ್ಕರ್ ಕಮಾಂಡರ್ ಝಕಿ ಉರ್ ರಹಮಾನ್ ಲಖ್ವಿ ಮತ್ತು ಅದರ ಸಂವಹನ ವಿಶೇಷಜ್ಞ ಜರಾರ್ ಷಾ ಸೇರಿದಂತೆ 7 ಮಂದಿ ಲಷ್ಕರ್ ಸದಸ್ಯರನ್ನು ಪಾಕಿಸ್ತಾನವು ಬಂಧಿಸಿತ್ತು. ಆದರೆ, ಈ ಕೇಸಿನ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರೇ ಬುಧವಾರ, 'ನನಗೆ ಒತ್ತಡವಿದೆ, ನಾನು ಪದ ತ್ಯಾಗ ಮಾಡುತ್ತೇನೆ' ಎಂದು ಹೇಳುವ ಮೂಲಕ ತನಿಖೆಗೆ ಹಿನ್ನಡೆಯಾಗಿದೆ.
ಇದೇ ವೇಳೆ, ಬಲೂಚಿಸ್ತಾನದ ಪ್ರತ್ಯೇಕತಾವಾದಿ ಹೋರಾಟದಲ್ಲಿ ಭಾರತದ ಕೈವಾಡವಿದೆ ಎಂಬುದನ್ನು ಮಲಿಕ್ ಮತ್ತೊಮ್ಮೆ ಆರೋಪಿಸಿ ತಮ್ಮ ನಾಲಿಗೆ ಎಷ್ಟು ಸಡಿಲವಿದೆ ಎಂಬುದನ್ನು ಮಗದೊಮ್ಮೆ ತೋರಿಸಿಕೊಟ್ಟಿದ್ದಾರೆ. 'ಬಲೂಚಿಸ್ತಾನದಲ್ಲಿ ಭಾರತ ಕೈವಾಡವಿದೆ ಎಂಬುದನ್ನು ನಾನು ಹೇಳುತ್ತಲೇ ಬಂದಿದ್ದೇನೆ. ನಮ್ಮಲ್ಲಿ ಈ ಬಗ್ಗೆ ಸಾಕ್ಷ್ಯಾಧಾರವೂ ಇದೆ. ಭಾರತ ಈ ಬಗ್ಗೆ ಚರ್ಚಿಸಲು ಒಪ್ಪಿ ಮುಂದೆ ಬಂದರೆ ಅದನ್ನು ಅವರೊಂದಿಗೆ ಹಂಚಿಕೊಳ್ಳಲು ಸಿದ್ಧ' ಎಂದಿದ್ದಾರೆ ಮಲಿಕ್!