ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರ ಮೇಲೆ ಶೂ ಎಸೆದು ಹಲವು ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಇರಾಕ್‌ನ ವರದಿಗಾರ ಮುಂತಾಜರ್ ಅಲ್-ಜೈದಿ,ಡಿಸೆಂಬರ್ 1 ರಂದು ಪ್ಯಾರಿಸ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿರುವಾಗ ಶೂ ಎಸೆತದ ದಾಳಿಗೆ ಸಿಲುಕಿದ್ದಾರೆ.
ಇರಾಕ್‌ನ ಅಕ್ರೋಶಭರಿತ ನಾಗರಿಕರ ಸಂಕೇತವಾಗಿದ್ದ ಮುಂತಾಜರ್ ಅಲ್-ಜೈದಿ, ಇರಾಕ್ ಯುದ್ಧದಿಂದ ಬಲಿಪಶುವಾದ ನಾಗರಿಕರ ಬಗ್ಗೆ ಪ್ರಚಾರ ನಡೆಸಲು ಪತ್ರಿಕಾಗೋಷ್ಠಿ ನಡೆಸುತ್ತಿರುವಾಗ ಪ್ರೇಕ್ಷಕನೊಬ್ಬ ಜೈದಿಗೆ ಶೂ ಎಸೆದಾಗ ಗೋಡೆಗೆ ಅಪ್ಪಳಿಸಿ ನಂತರ ಜೈದಿಯ ತಲೆಗೆ ಬಡಿಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಶೂ ಎಸೆದ ಪ್ರೇಕ್ಷಕ ಅಮೆರಿಕದ ಸೇನಾನೀತಿಗಳನ್ನು ಸಮರ್ಥಿಸಿಕೊಂಡ ಹಿನ್ನೆಲೆಯಲ್ಲಿ ಇರಾಕ್‌ನ ವರದಿಗಾರ ಹುದ್ದೆಯಿಂದ ಉಚ್ಚಾಟಿತಗೊಂಡ ಪತ್ರಕರ್ತನಾಗಿದ್ದು, ಶೂ ಎಸೆಯುವ ಮುನ್ನ ಜೈದಿಯ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದನೆಂದು ಫ್ರೆಂಚ್ ಮಾಧ್ಯಮಗಳು ವರದಿ ಮಾಡಿವೆ.
ಇರಾಕ್‌ನಲ್ಲಿ ಅಮೆರಿಕನ್ ಸೇನಾಹಸ್ತಕ್ಷೇಪ ಹಾಗೂ ಯುದ್ಧದಿಂದಾದ ರಕ್ತಪಾತಗಳು ಜೈದಿ ಸೇರಿದಂತೆ ಇತರ ಇರಾಕಿಗಳನ್ನು ಕೆರಳಿಸಿತ್ತು ಎಂದು ಮಾಧ್ಯಮಗಳು ಪ್ರಕಟಿಸಿವೆ.
ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಇರಾಕ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿರುವಾಗ ಜೈದಿ ಶೂ ಎಸೆಯುವ ಮುನ್ನ ಇದು ಇರಾಕ್ ಜನತೆಯ 'ಗುಡ್ ಬೈ ಕಿಸ್ 'ಎಂದು ಗಟ್ಟಿ ಧ್ವನಿಯಿಂದ ಕೂಗಿ ಶೂ ಎಸೆದಿರುವುದು ಜಗತ್ತಿನಾದ್ಯಂತ ಮಿಲಿಯನ್‌ಗಟ್ಟಲೆ ಜನತೆ ನೋಡಿದ್ದರು.
ಇರಾಕ್‌ನ ಟೆಲಿವಿಜನ್ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಜೈದಿ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರ ಮೇಲೆ ಶೂ ಎಸೆದ ಆರೋಪದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದನು. ನಂತರ ಶಿಕ್ಷೆಯ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಲಾಯಿತು. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ನಂತರ ಜೈದಿ, ತನಗೆ ಅಮೆರಿಕ ಸೈನಿಕರಿಂದ ದೈಹಿಕ ಹಿಂಸೆ ನೀಡಲಾಯಿತು ಎಂದು ಆರೋಪಿಸಿದ್ದನು.