ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವ್ಯಂಗ್ಯಚಿತ್ರಕಾರನ ಮೇಲೆ ದಾಳಿ; ಉಗ್ರರಿಂದ ಭಾರೀ ಪ್ರಶಂಸೆ (Danish cartoonist | Terror links | Prophet Mohammed | Kurt Westergaard)
Bookmark and Share Feedback Print
 
ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರ ಬಿಡಿಸಿ ಮುಸ್ಲಿಮರ ಕ್ರೋಧಕ್ಕೆ ಗುರಿಯಾಗಿದ್ದ ಡ್ಯಾನಿಷ್ ಚಿತ್ರಕಾರನ ಮನೆ ಮೇಲೆ ದಾಳಿ ನಡೆಸಿದ ಸೋಮಾಲಿ ಪ್ರಜೆಯ ಬಗ್ಗೆ ಸೋಮಾಲಿಯಾದ ಇಸ್ಲಾಮಿಕ್ ಶೆಬಾಬ್ ಉಗ್ರಗಾಮಿ ಗುಂಪು ಅಭಿನಂದನೆಗಳ ಸುರಿಮಳೆ ಸುರಿಸಿದೆ.

ನಮ್ಮ ಪ್ರವಾದಿ ಮೊಹಮ್ಮದರನ್ನು ನಿಂದಿಸಿದ್ದ ದುರುಳನ ಮೇಲೆ ನಮ್ಮ ಮುಸ್ಲಿಂ ಸೋಮಾಲಿ ಹುಡುಗ ನಡೆಸಿದ ದಾಳಿಯನ್ನು ನಾವು ಪ್ರಶಂಸಿಸುತ್ತೇವೆ. ಅಲ್ಲದೆ ಅವನಂತಹ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಳ್ಳುವಂತೆ ಪ್ರಪಂಚದ ಮುಸ್ಲಿಮರಿಗೆ ನಾವು ಕರೆ ನೀಡುತ್ತಿದ್ದೇವೆ ಎಂದು ಶೆಬಾಬ್ ವಕ್ತಾರ ಶೇಖ್ ಆಲಿ ಮುಹಮುದ್ ರಾಗೆ ತಿಳಿಸಿದ್ದಾನೆ.

ಡ್ಯಾನಿಷ್ ಕಾರ್ಟೂನಿಸ್ಟ್ ಮೇಲೆ ದಾಳಿಗೆ ಯತ್ನಿಸಿದ ಸೋಮಾಲಿ ಪ್ರಜೆಯನ್ನು ಬಂಧಿಸಲಾಗಿದ್ದು, ಆತ ಸೋಮಾಲಿಯಾದ ಉಗ್ರಗಾಮಿ ಸಂಘಟನೆ ಆಲ್-ಶೆಬಾಬ್ ಮತ್ತು ಪೂರ್ವ ಆಫ್ರಿಕಾದ ಆಲ್-ಖೈದಾ ಜತೆ ಸಂಬಂಧ ಹೊಂದಿರುವುದು ಪತ್ತೆಯಾಗಿದೆ ಎಂದು ನಿನ್ನೆಯಷ್ಟೇ ಡೆನ್ಮಾರ್ಕ್ ಗುಪ್ತಚರ ಇಲಾಖೆಯು ತಿಳಿಸಿತ್ತು.

ಈ ಹುಡುಗ ಶೆಬಾಬ್ ಅಥವಾ ಇತರ ಇಸ್ಲಾಮಿಕ್ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಕೆಲವು ಮಂದಿ ಹೇಳಬಹುದು. ಆದರೆ ನಾನು ಹೇಳುತ್ತಿದ್ದೇನೆ-- ಇದು ಕೇವಲ ಶೆಬಾಬ್ ಅಥವಾ ಇಸ್ಲಾಮಿಕ್ ಸಂಘಟನೆಗಳಿಗೆ ಮಾತ್ರ ಸಂಬಂಧಿಸಿದ ವಿಚಾರವಲ್ಲ ಎಂದು ರಾಗೆ ತಿಳಿಸಿದ್ದಾನೆ.

ಎಲ್ಲಾ ಮುಸ್ಲಿಮರೂ ತಮ್ಮ ಧರ್ಮ ಮತ್ತು ಪ್ರವಾದಿಯವರನ್ನು ರಕ್ಷಿಸಲು ನಡೆಸಬೇಕಾದ ಪ್ರಧಾನ ಕರ್ತವ್ಯವಿದು. ಯಾವುದೇ ಓರ್ವ ಮುಸ್ಲಿಂ ಮಾಡಬೇಕಾದ ಕಾರ್ಯವನ್ನು ಆ ಹುಡುಗ ಮಾಡಿದ್ದಾನೆ ಎಂದು ಉಗ್ರವಾದಿ ಸಂಘಟನೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಕೆಲ ವರ್ಷಗಳ ಹಿಂದೆ ಡೆನ್ಮಾರ್ಕ್‌ನ ಕುರ್ತ್ ವೆಸ್ಟರ್‌ಗಾರ್ಡ್ ಎಂಬ ಕಾರ್ಟೂನಿಸ್ಟ್ ಕೆಲವು ವ್ಯಂಗ್ಯಚಿತ್ರಗಳನ್ನು ಬರೆದು ಅಲ್ಲಿನ ಪತ್ರಿಕೆಯೊಂದರಲ್ಲಿ ಪ್ರಕಟಿಸಿದ್ದರು. ಇದು ತೀವ್ರ ವಿವಾದಕ್ಕೊಳಗಾಗಿ ಭಾರೀ ಪ್ರತಿಭಟನೆಯನ್ನು ವಿಶ್ವದಾದ್ಯಂತದಿಂದ ಎದುರಿಸಬೇಕಾಯಿತು. ಇದೇ ಹಿನ್ನೆಲೆಯಲ್ಲಿ ಅವರ ಮನೆ ಮೇಲೆ ಮುಸ್ಲಿಂ ಯುವಕನೊಬ್ಬ ಕೆಲ ದಿನಗಳ ಹಿಂದೆ ದಾಳಿಗೆ ಯತ್ನಿಸಿದ್ದ.
ಸಂಬಂಧಿತ ಮಾಹಿತಿ ಹುಡುಕಿ