ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇದೇ ವರ್ಷ ಮಯನ್ಮಾರ್ ಚುನಾವಣೆ ನಡೆಯಲಿದೆ: ಮಿಲಿಟರಿ (Myanmar | General elections | Aung San Suu Kyi | Military rule)
Bookmark and Share Feedback Print
 
ಕಳೆದೆರಡು ದಶಕಗಳಿಂದ ಮಿಲಿಟರಿ ಆಡಳಿತ ಹೇರಲ್ಪಟ್ಟಿರುವ ಬರ್ಮಾದಲ್ಲಿ ಮೊತ್ತ ಮೊದಲ ಮಹಾಚುನಾವಣೆ ಈ ವರ್ಷ ನಡೆಯಲಿರುವುದನ್ನು ಮಯನ್ಮಾರ್ ಮಿಲಿಟರಿ ಮುಖ್ಯಸ್ಥ ಸೋಮವಾರ ಖಚಿತಪಡಿಸಿದ್ದು, ಚುನಾವಣೆಯ ದಿನಾಂಕವನ್ನು ಅವರು ತಿಳಿಸಿಲ್ಲ. ಆದರೆ ಪ್ರಜಾಪ್ರಭುತ್ವದ ಕನಸಿನಲ್ಲಿರುವ ಆಂಗ್ ಸಾನ್ ಸೂಕಿಯವರನ್ನು ಚುನಾವಣೆಯಿಂದ ಹೊರಗಿಡಲಾಗುತ್ತದೆ ಎಂದು ಹೇಳಲಾಗಿದೆ.
Myanmar flag
PR


ಬ್ರಿಟನ್‌ನಿಂದ 1948ರಲ್ಲಿ ಸ್ವತಂತ್ರಗೊಂಡ ಸಂಭ್ರಮಾಚರಣೆ ಸಂದರ್ಭದಲ್ಲಿ ರವಾನಿಸಿರುವ ಸಂದೇಶವೊಂದರಲ್ಲಿ ಹಿರಿಯ ಮಿಲಿಟರಿ ಜನರಲ್ ಥಾನ್ ಸ್ವೇ ಅವರು, ದೇಶವನ್ನು ಪ್ರಜಾಸತ್ತಾತ್ಮಕ ಹಾದಿಯತ್ತ ಕೊಂಡೊಯ್ಯುವ ಏಕಮಾತ್ರ ಮಾರ್ಗವೆಂದರೆ ಮಿಲಿಟರಿ ಆಡಳಿತವು ರಚಿಸುತ್ತಿರುವ ಹಾದಿ ಎಂದು ಅವರು ತಿಳಿಸಿದ್ದಾರೆ.

ಇದೇ ವರ್ಷ ವಿಧಿವತ್ತಾಗಿ ಚುನಾವಣೆಗಳನ್ನು ನಡೆಸುವ ಯೋಜನೆಗಳು ಕಾರ್ಯರೂಪದ ಹಂತದಲ್ಲಿವೆ. ಪ್ರತಿಯೊಬ್ಬರೂ ತಮ್ಮ ಸರಿಯಾದ ಆಯ್ಕೆಯನ್ನು ನಡೆಸುವಂತಾಗಬೇಕು ಎನ್ನುವುದರ ಕಡೆ ಹೆಚ್ಚು ಒತ್ತು ನೀಡುವ ನಿಟ್ಟಿನಿಂದ ಯೋಜನೆಗಳು ರೂಪುಗೊಳ್ಳುತ್ತಿವೆ ಎಂದು ದೇಶದ ಪತ್ರಿಕೆಗಳಿಗೆ ಕಳುಹಿಸಿರುವ ಸಂದೇಶದಲ್ಲಿ ದೇಶದ ಪ್ರಸಕ್ತ ಮುಖ್ಯಸ್ಥ ತಿಳಿಸಿದ್ದಾರೆ.

ಅವರ ಸಂದೇಶದಲ್ಲಿ ತಿಳಿಸಿರುವ 'ಸರಿಯಾದ ಆಯ್ಕೆಗಳು' ಎಂಬುದಕ್ಕೆ ಯಾವುದೇ ಸ್ಪಷ್ಟನೆ ನೀಡದಿದ್ದರೂ, ಇದು ಮಿಲಿಟರಿ ಆಡಳಿತವನ್ನು ಬೆಂಬಲಿಸುವ ರಾಜಕೀಯ ಪಕ್ಷಗಳನ್ನು ಗೆಲ್ಲಿಸಬೇಕು ಎಂಬ ಅರ್ಥವನ್ನು ಮತದಾರರ ಮೇಲೆ ಹೇರುವ ಯತ್ನ ಎಂದು ಅಭಿಪ್ರಾಯಪಡಲಾಗಿದೆ.

ಕಳೆದ ಸರಿಸುಮಾರು 50 ವರ್ಷಗಳಿಂದ ಕ್ಷಿಪ್ರಕ್ರಾಂತಿಯ ಮೂಲಕ ಮಿಲಿಟರಿ ಆಡಳಿತಕ್ಕೊಳಗಾಗಿರುವ ಮಯನ್ಮಾರ್‌ನಲ್ಲಿ ಚುನಾವಣೆ ನಡೆಸುವ ಸಂಬಂಧ ಸಿದ್ಧತೆಗಳು ನಡೆಯುತ್ತಿವೆ.

ಕಳೆದ ಹಲವು ವರ್ಷಗಳಿಂದ ಆಂಗ್ ಸಾನ್ ಸೂಕಿ ಅವರು ಪ್ರಜಾಡಳಿತಕ್ಕಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದು, ಮಿಲಿಟರಿ ಆಡಳಿತವು ಅವರನ್ನು ಗೃಹಬಂಧನದಲ್ಲಿಟ್ಟಿದೆ.

ಚುನಾವಣೆಗೂ ಮೊದಲು ನಡೆಯಬೇಕಾಗಿರುವ ಮಹತ್ವದ ಹೆಜ್ಜೆ ಸಂವಿಧಾನವನ್ನು ರೂಪಿಸುವುದು. ಆದರೆ 2008ರಲ್ಲಿ ಸ್ವೀಕರಿಸಲಾದ ಸರ್ವಾಧಿಕಾರಿ ಧೋರಣೆಯ ಸಂವಿಧಾನದ ಬಗ್ಗೆ ತೀವ್ರವಾದ ಟೀಕೆಗಳು ಪ್ರಜಾಭಿಪ್ರಾಯದಲ್ಲಿ ವ್ಯಕ್ತವಾಗಿತ್ತು. ಈ ಸಂವಿಧಾನವು ಕಾಲು ಭಾಗದಷ್ಟು ಸಂಸತ್ ಸ್ಥಾನಗಳನ್ನು ಮಿಲಿಟರಿಗೆ ಮೀಸಲಿಟ್ಟಿತ್ತು. ಈ ಸಂಬಂಧ ಕೈಗೊಳ್ಳಬೇಕಾದ ಅಂತಿಮ ಹೆಜ್ಜೆ ಚುನಾವಣೆ.

ಆದರೆ ವಿಮರ್ಶಕರ ಪ್ರಕಾರ ಈಗ ನಡೆಯುತ್ತಿರುವುದು ನಾಗರಿಕ ಆಡಳಿತದ ಸೋಗಿನಲ್ಲಿ ಮಿಲಿಟರಿ ಆಡಳಿತವನ್ನು ಹೇರುವ ಪ್ರಕ್ರಿಯೆ. ಇತ್ತೀಚೆಗಷ್ಟೇ ಆಂಗ್ ಸಾನ್ ಸೂಕಿಯವರ ಗೃಹಬಂಧನವನ್ನು 18 ತಿಂಗಳುಗಳ ಕಾಲ ವಿಸ್ತರಿಸಲಾಗಿದ್ದು, ಅವರನ್ನು ಚುನಾವಣೆಯಿಂದ ಹೊರಗಿಡುವುದು ನಿಶ್ಚಿತ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ