ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಒಸಾಮಾ ವಿವಾದಿತ ಚಿತ್ರ ವಾಪಸ್ ಪಡೆದ ಎಫ್‌ಬಿಐ (FBI | Spanish politican | Osama bin Laden | Gaspar Llamazares)
Bookmark and Share Feedback Print
 
Osama, FBI pic and Spain MP
PR
ಆಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಈಗ ಹೀಗಿರಬಹುದು ಎಂದು ಅಮೆರಿಕಾದ ತನಿಖಾ ಸಂಸ್ಥೆ ಎಫ್‌ಬಿಐ ಬಿಡುಗಡೆ ಮಾಡಿದ್ದ ನೂತನ ಚಿತ್ರ ಭಾರೀ ವಿವಾದ ಸೃಷ್ಟಿಸಿದ ನಂತರ ಇದೀಗ ವಾಪಸ್ ಪಡೆದುಕೊಳ್ಳಲಾಗಿದೆ.

ಸ್ಪೇನ್‌ನ ರಾಜಕಾರಣಿ 52ರ ಹರೆಯದ ಗಾಸ್ಪರ್ ಲಾಮಜರೇಸ್ ಎಂಬವರನ್ನು ಹೋಲುವ ಚಿತ್ರವನ್ನು ಎಫ್‌ಬಿಐ ಬಿಡುಗಡೆ ಮಾಡಿ, ಲಾಡೆನ್ ಹೀಗಿರಬಹುದು ಎಂದಿತ್ತು.

ಆದರೆ ಚಿತ್ರ ಬಿಡುಗಡೆಯಾದ ಕೂಡಲೇ ಸ್ಪೇನ್ ಸಂಸದ, ಇದು ತನ್ನದೇ ಚಿತ್ರ ಎಂದು ರುಜುವಾತುಪಡಿಸುವುದಾಗಿ ಹೇಳಿದ್ದರಲ್ಲದೆ ನ್ಯಾಯಾಲಯದ ಕಟಕಟೆಗೆ ಎಫ್‌ಬಿಐಯನ್ನು ತರುವುದಾಗಿ ಬೆದರಿಕೆ ಹಾಕಿದ್ದರು.

ಅಷ್ಟರಲ್ಲಿ ಎಫ್‌ಬಿಐ ತನ್ನ ತಪ್ಪನ್ನು ಒಪ್ಪಿಕೊಂಡು ವೆಬ್‌ಸೈಟಿನಿಂದ ಛಾಯಾಚಿತ್ರವನ್ನು ವಾಪಸ್ ಪಡೆದುಕೊಂಡಿದೆ. ಅಲ್ಲದೆ ತಾನು ಸ್ಪೇನ್ ರಾಜಕಾರಣಿಯ ಚಿತ್ರವನ್ನು ಬಳಸಿಕೊಂಡದ್ದು ಹೌದು ಎಂದೂ ಒಪ್ಪಿಕೊಂಡಿದೆ.

ಅದಕ್ಕೂ ಮೊದಲು ಸ್ಪೇನ್ ರಾಜಕಾರಣಿಯ ಚಿತ್ರ ಇದಲ್ಲ, ಇದು ನಮ್ಮ ತಂತ್ರಜ್ಞರು ತಯಾರಿಸಿದ ಡಿಜಿಟಲ್ ಕಂಪ್ಯೂಟರಿನಿಂದ ಸೃಷ್ಟಿಯಾದ ಚಿತ್ರ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿತ್ತು.

ಎಫ್‌ಬಿಐ ವಕ್ತಾರ ಕೆನ್ ಹಾಫ್‌ಮೆನ್ ಎಂಬವರು ಆಗಿರುವ ತಪ್ಪನ್ನು ಒಪ್ಪಿಕೊಂಡಿದ್ದು, ಇದು ಸಂಸ್ಥೆಯ ತಂತ್ರಜ್ಞನಿಂದಾದ ಪ್ರಮಾದ ಎಂದು ಹೇಳಿದ್ದಾರೆ. ಎಫ್‌ಬಿಐ ಸಾಫ್ಟ್‌ವೇರ್ ನೀಡಿದ ಚಿತ್ರದಿಂದ ತೃಪ್ತಿಯಾಗದ ತಂತ್ರಜ್ಞ, ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಹುಡುಕಿದಾಗ ಸಿಕ್ಕಿದ ಫೋಟೋವೊಂದರ ಕೂದಲುಗಳನ್ನು ಹಾಗೆ ಎತ್ತಿ ಹಾಕಿದ್ದ. ಇದರಲ್ಲಿ ಯಾವುದೇ ದುರುದ್ದೇಶವಿರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದಿನ ಚಿತ್ರಗಳಲ್ಲೆಲ್ಲಾ ಲಾಡೆನ್ ಉದ್ದದ ಗಡ್ಡ ಮತ್ತು ರುಮಾಲು ಧರಿಸಿದ್ದರೆ, ಎಫ್‌ಬಿಐ ಕಳೆದ ವಾರ ಬಿಡುಗಡೆ ಮಾಡಿದ್ದ ಚಿತ್ರದಲ್ಲಿ ಕತ್ತರಿಸಿದ ಗಡ್ಡ ಮತ್ತು ರುಮಾಲಿಲ್ಲದ ಲಾಡೆನ್‌ನನ್ನು ಕಾಣಬಹುದಾಗಿತ್ತು. ವಯಸ್ಸಾಗಿರುವ ಲಾಡೆನ್ ಈಗ ಹೀಗಿರಬಹುದು ಎಂದು ಹೇಳಿದ್ದ ಎಫ್‌ಬಿಐ ಇದೀಗ ನಗೆಪಾಟಲಿಗೀಡಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ