ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ; 20 ಉಗ್ರರನ್ನು ಗುರುತಿಸಿದ ಪಾಕಿಸ್ತಾನ (Pakistan | Mumbai attack | Terrorist | Federal Investigation Agency)
Bookmark and Share Feedback Print
 
2008ರ ಮುಂಬೈ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಬೇಕಾಗಿದ್ದ 20 ಉಗ್ರರ ಜಾಡನ್ನು ತಾನು ಪತ್ತೆ ಹಚ್ಚಿರುವುದಾಗಿ ಪಾಕಿಸ್ತಾನದ ಕೇಂದ್ರೀಯ ತನಿಖಾ ದಳ ಹೇಳಿಕೊಂಡಿದೆ.

ನವೆಂಬರ್ 26ರಂದು ಮುಂಬೈಯ ಹಲವೆಡೆ ದಾಳಿ ನಡೆಸಿ ಹತ್ಯಾಕಾಂಡಕ್ಕೆ ಕಾರಣವಾದ 10 ಭಯೋತ್ಪಾದಕರಿಗೆ ಅಕ್ರಮವಾಗಿ ಹಣಕಾಸು ಸಹಾಯ ಮಾಡಿದವರು ಮತ್ತು ಇತರ ಎಲ್ಲಾ ಉಗ್ರರನ್ನು ಕೇಂದ್ರೀಯ ತನಿಖಾ ದಳದ ವಿಶೇಷ ತನಿಖಾ ತಂಡವು ಪತ್ತೆ ಹಚ್ಚಿದೆ ಎಂದು ಡೈಲೀ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಮೂಲಗಳ ಪ್ರಕಾರ ದಾಳಿ ನಡೆಸಿದ ಭಯೋತ್ಪಾದಕರು ಮತ್ತು ಬಂಧನಕ್ಕೊಳಗಾಗಿರುವ ಉಗ್ರಗಾಮಿಗಳ ಭಾವ ಚಿತ್ರಗಳನ್ನು ಕೂಡ ಪಾಕಿಸ್ತಾನದ ಈ ವಿಶೇಷ ತನಿಖಾ ತಂಡವು ಸಂಗ್ರಹಿಸಿದೆ.

ತನ್ನ ನೆಲದದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಅವಕಾಶ ನೀಡಬಾರದು, ಅದನ್ನು ತಡೆಯಬೇಕು ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ಇಸ್ಲಾಮಾಬಾದ್‌ನ್ನು ಆಗ್ರಹಿಸಿದ ಬೆನ್ನಿಗೆ ಪಾಕಿಸ್ತಾನದಲ್ಲಿ ಈ ಬೆಳವಣಿಗೆಗಳು ಕಂಡು ಬಂದಿವೆ.

ಟೀವಿ ವಾಹಿನಿಯೊಂದರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿರುಪಮಾ ರಾವ್, ಪಾಕಿಸ್ತಾನ ಸರಕಾರವು ತನ್ನ ನೆಲದಲ್ಲಿ ಭಯೋತ್ಪಾದಕ ಕೃತ್ಯಗಳು ರೂಪುಗೊಳ್ಳದಂತೆ ಅದರ ಮೂಲಭೂತ ವ್ಯವಸ್ಥೆಗಳನ್ನು ದುರ್ಬಲಗೊಳಿಸಬೇಕು ಮತ್ತು ಅಮಾಯಕ ಭಾರತೀಯರು ಸತತವಾಗಿ ಬಲಿಪಶುಗಳಾಗುತ್ತಿರುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದರು.

ಭಾರತದ ವಾಣಿಜ್ಯ ರಾಜಧಾನಿಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ಲಷ್ಕರ್ ಇ ತೋಯ್ಬಾ ಕಮಾಂಡರ್ ಝಾಕಿರ್ ರೆಹಮಾನ್ ಲಖ್ವಿ, ಝರಾರ್ ಶಾ, ಅಬು ಅಲ್ ಖಾಮ, ಹಮಾದ್ ಅಮೀನ್ ಸಾದಿಕ್, ಶಾಹಿದ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಮತ್ತು ಯೂನಸ್ ಅಂಜುಮ್ ಕೈವಾಡವಿರುವುದನ್ನು ಮನಗಂಡಿರುವ ಪಾಕಿಸ್ತಾನ, ಈಗಾಗಲೇ ಬಂಧಿಸಿದೆ. ಅವರ ವಿಚಾರಣೆಗಳು ಅಲ್ಲಿನ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ. ಇದೀಗ ಮತ್ತೆ 20 ಮಂದಿಯನ್ನು ಗುರುತಿಸಿರುವುದು ಧನಾತ್ಮಕ ಬೆಳವಣಿಗೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ