ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ಹ್ಯಾಕಿಂಗ್ ಆರೋಪ ಆಧಾರರಹಿತ: ಚೀನಾ (China | India | MK Narayanan | Trojan virus)
Bookmark and Share Feedback Print
 
ಅಮೆರಿಕಾದ ಇಂಟರ್ನೆಟ್ ದೈತ್ಯ ಗೂಗಲ್ ಆರೋಪದ ಬೆನ್ನಿಗೆ ಮಾಡಿದ್ದ ಭಾರತದ ಆರೋಪವನ್ನು ತಳ್ಳಿ ಹಾಕಿರುವ ಚೀನಾ, ಭಾರತ ಸರಕಾರದ ಕಂಪ್ಯೂಟರುಗಳಿಂದ ರಕ್ಷಣಾ ಮಾಹಿತಿಗಳನ್ನು ಕದಿಯಲು ಚೀನಾ ಯತ್ನಿಸಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದೆ.

ಭಾರತ ಮಾಡಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾ ಝಾಕ್ಸೂ ತಿಳಿಸಿದ್ದಾರೆ.

ತನ್ನ ಕಚೇರಿ ಸೇರಿದಂತೆ ಭಾರತ ಸರಕಾರದ ಕಂಪ್ಯೂಟರುಗಳಲ್ಲಿನ ಮಾಹಿತಿಗಳನ್ನು ಡಿಸೆಂಬರ್ 15ರಂದು ಕಳವು ಮಾಡಲೆತ್ನಿಸಿದ ಹ್ಯಾಕರುಗಳಲ್ಲಿ ಚೀನಾದವರೂ ಇರಬಹುದು ಎಂಬ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಆರೋಪಕ್ಕೆ ಪ್ರತಿಕ್ರಿಯೆ ಕೇಳಿದಾಗ ಝಾಕ್ಸೂ ಮೇಲಿನಂತೆ ರೀತಿ ಹೇಳಿದರು.

ಇಂತಹ ಹ್ಯಾಕಿಂಗ್ ಅಕ್ರಮಗಳಿಗೆ ಚೀನಾವೇ ಬಹುದೊಡ್ಡ ಬಲಿಪಶುವಾಗಿದೆ. ಹಾಗಾಗಿ ಭಾರತದ ರಕ್ಷಣಾ ಮಾಹಿತಿಗಳನ್ನು ಕದಿಯುವ ಆರೋಪಗಳು ಸಂಪೂರ್ಣ ಕಪೋಲಕಲ್ಪಿತ ಎಂದು ಚೀನಾ ಹೇಳಿದೆ.

ಅಮೆರಿಕಾದ ರಕ್ಷಣಾ ಇಲಾಖೆ, ಹಣಕಾಸು ಇಲಾಖೆ ಹಾಗೂ ಗೂಗಲ್ ಸೇರಿದಂತೆ ಹಲವು ಟೆಕ್ನಾಲಜಿ ಕಂಪನಿಗಳ ಮೇಲೆ ಚೀನಾದಿಂದ ಸೈಬರ್ ದಾಳಿಗಳು ನಡೆದ ದಿನವಾದ ಡಿಸೆಂಬರ್ 15ರಂದೇ ತನ್ನ ಕಚೇರಿ ಮತ್ತು ಸರಕಾರಿ ಕಚೇರಿಗಳ ಮೇಲೂ ದಾಳಿ ನಡೆದಿದೆ ಎಂದು ನಾರಾಯಣನ್ ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿದ್ದರು.

ನಮ್ಮ ಕಂಪ್ಯೂಟರುಗಳಿಂದ ಮಾಹಿತಿಗಳನ್ನು ಕಳ್ಳತನ ಮಾಡಲು ಯತ್ನಿಸಿದ ಉದಾಹರಣೆ ಇದೇ ಮೊದಲಲ್ಲ ಎಂದು 'ದ ಟೈಮ್ಸ್' ಪತ್ರಿಕೆಗೆ ಹೇಳಿದ್ದ ಅವರು, ದಾಳಿಕೋರರು ಪಿಡಿಎಫ್ ಅಟ್ಯಾಚ್‌ಮೆಂಟ್ ಹೊಂದಿರುವ ಇ-ಮೇಲ್‌ನಲ್ಲಿ ಟ್ರಾಜನ್ ವೈರಸ್ ಹರಿಯಬಿಟ್ಟಿದ್ದಾರೆ ಎಂದು ಬಹಿರಂಗಪಡಿಸಿದ್ದರು.

ಈ ವೈರಸ್ ಮೂಲಕ ದಾಳಿಕೋರರಿಗೆ ದಾಳಿಗೊಳಗಾದ ಕಂಪ್ಯೂಟರಿನಿಂದ ಮಾಹಿತಿಗಳನ್ನು ಡೌನ್‌ಲೋಡ್ ಅಥವಾ ಡಿಲೀಟ್ ಮಾಡಬಹುದಾಗಿತ್ತು. ಆದರೆ ಇದನ್ನು ಪತ್ತೆ ಹಚ್ಚಲಾಗಿದ್ದು, ಅದನ್ನು ನಾಶಪಡಿಸುವವರೆಗೆ ಇ-ಮೇಲ್ ತೆರೆಯದಂತೆ ಸೂಚನೆಗಳನ್ನು ನೀಡಲಾಗಿದೆ. ಇದರ ಹಿಂದೆ ಚೀನಾ ಇರುವ ಬಗ್ಗೆ ನಮ್ಮ ಶಂಕೆಗಳು ಹೆಚ್ಚಿವೆ ಎಂದು ನಾರಾಯಣನ್ ಹೇಳಿದ್ದರು.

ಚೀನಾದ ಮಾನವ ಹಕ್ಕುಗಳ ಕಾರ್ಯಕರ್ತರ ಇ-ಮೇಲ್ ಖಾತೆಗಳನ್ನು ಬೇಧಿಸಲು ಯತ್ನಿಸಿದ ಚೀನಾ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದ ಗೂಗಲ್, ರಾಷ್ಟ್ರದಲ್ಲಿನ ಸೇವೆಗಳನ್ನು ರದ್ದು ಮಾಡುವುದಾಗಿ ಬೆದರಿಕೆ ಹಾಕಿತ್ತು. ಆದರೆ ಚೀನಾ ಇದೀಗ ಹ್ಯಾಕರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ