ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಅಣ್ವಸ್ತ್ರ ಪಿತಾಮಹ ಎಕ್ಯೂ ಖಾನ್‌ಗೆ ಮತ್ತೆ ನಿರ್ಬಂಧ? (Pakistan | Lahore High Court | nuclear scientist | Dr Abdul Qadeer Khan)
Bookmark and Share Feedback Print
 
ಪಾಕಿಸ್ತಾನ ಅಣ್ವಸ್ತ್ರ ಪಿತಾಮಹ ಡಾ. ಅಬ್ದುಲ್ ಖಾದಿರ್ ಖಾನ್ ಅವರ ಮುಕ್ತ ಸಂಚಾರ ಮತ್ತು ಮಾಧ್ಯಮಗಳೊಂದಿಗಿನ ಸಂವಾದಕ್ಕೆ ನಿಷೇಧ ಹೇರಬೇಕೆಂದು ಪಾಕಿಸ್ತಾನ ಸರಕಾರವು ಲಾಹೋರ್ ಹೈಕೋರ್ಟಿನಲ್ಲಿ ಮನವಿಯೊಂದನ್ನು ಸಲ್ಲಿಸಿದೆ.

ಖಾದಿರ್ ಅವರಿಗೆ ನೀಡಲಾಗಿರುವ ಸ್ವಾತಂತ್ರ್ಯವು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ ಎಂದು ಫೆಡರಲ್ ಸರಕಾರ ತನ್ನ ಮನವಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ.

ವಿದೇಶಿ ಮತ್ತು ಸ್ಥಳೀಯ ಪತ್ರಕರ್ತರನ್ನು ಖಾನ್ ಇತ್ತೀಚೆಗೆ ಭೇಟಿ ಮಾಡಿದ್ದು, ದೇಶದ ಭದ್ರತಾ ವ್ಯವಸ್ಥೆಯ ನೆಲೆಗಟ್ಟಿನ ಬಗ್ಗೆ ಭೀತಿಯುಂಟಾಗಿದೆ. ಅಣು ವಿಜ್ಞಾನಿ ದೇಶೀಯ ಮತ್ತು ಹೊರರಾಷ್ಟ್ರಗಳ ಮಾಧ್ಯಮಗಳೊಂದಿಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂದೂ ಆರೋಪಿಸಲಾಗಿದೆ.

ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ, ಆಂತರಿಕ ಸಚಿವ ರೆಹಮಾನ್ ಮಲಿಕ್, ಐಎಸ್ಐ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶೂಜಾ ಪಾಷಾ, ಸಿಬ್ಬಂದಿಗಳ ಸಮಿತಿಯ ಜಂಟಿ ಮುಖ್ಯಸ್ಥರ ಅಧ್ಯಕ್ಷ ಜನರಲ್ ತಾರಿಖ್ ಮಜೀದ್, ಡಿಜಿ ತಾಂತ್ರಿಯಕ ಯೋಜನೆಯ ವಿಭಾಗದ ಲೆಫ್ಟಿನೆಂಟ್ ಜನರಲ್ ಖಾಲಿದ್ ಖಿದ್ವಾಯಿ ಮತ್ತು ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಮುಂತಾದ ಭದ್ರತಾ ಮುಖ್ಯಸ್ಥರು ಸೇರಿದ್ದ ಉನ್ನತ ಮಟ್ಟದ ಸಭೆಯಲ್ಲಿ ಖಾನ್ ಮೇಲೆ ನಿರ್ಬಂಧ ಹೇರಲು ನ್ಯಾಯಾಲಯದ ಮೆಟ್ಟಿಲೇರುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ನ್ಯಾಯಾಲಯದಿಂದ ಪಡೆದುಕೊಂಡಿದ್ದ ಅನುಮತಿಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಣು ವಿಜ್ಞಾನಿಗೆ ನಿರ್ಬಂಧ ಹೇರಬೇಕು ಎಂದು ಪಾಕಿಸ್ತಾನ ಸರಕಾರವು ಮನವಿ ಮಾಡಲು ನಿರ್ಧರಿಸಿತು ಎಂದು ಮೂಲಗಳು ಹೇಳಿವೆ.

ಖಾನ್ ಅವರನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಸತತ ಪರಿವೀಕ್ಷಣೆಯಲ್ಲಿ ಮತ್ತು ಭದ್ರತೆಯಲ್ಲಿ ಇಡಲು ಅವಕಾಶ ನೀಡಬೇಕೆಂದು ಮಂಗಳವಾರ ಫೆಡರಲ್ ಸರಕಾರವು ಈ ಮನವಿಯನ್ನು ಲಾಹೋರ್ ಹೈಕೋರ್ಟಿಗೆ ಸಲ್ಲಿಸಿದೆ.

ಖಾನ್ ಅವರು ಸಾಮಾನ್ಯ ನಾಗರಿಕರಂತೆ ಬದುಕಬಹುದು ಎಂದು ಈ ಹಿಂದೆ ಲಾಹೋರ್ ಹೈಕೋರ್ಟ್ ಅನುಮತಿ ನೀಡಿತ್ತು. ಮಾಧ್ಯಮಗಳೊಂದಿಗೂ ಮುಕ್ತವಾಗಿ ಮಾತುಕತೆ ನಡೆಸಬಹುದು ಎಂದು ಹೇಳಿತ್ತಾದರೂ, ಯಾವುದೇ ಕಾರಣಕ್ಕೂ ವಿದೇಶಿ ಪತ್ರಕರ್ತರೊಂದಿಗೆ ಸಂವಾದ ನಡೆಸಕೂಡದು ಎಂದು ಅವರಿಗೆ ನಿರ್ಬಂಧ ವಿಧಿಸಲಾಗಿತ್ತು.

ಕೆಲ ಸಮಯದ ಹಿಂದೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗೆ ಬರೆದಿದ್ದ ಪತ್ರವೊಂದರಲ್ಲಿ ಖಾನ್, ಪಾಕಿಸ್ತಾನವು ಚೀನಾ, ಉತ್ತರ ಕೊರಿಯಾ ಮತ್ತು ಇರಾನ್‌ಗಳ ಜತೆ ಹೇಗೆ ಅಣ್ವಸ್ತ್ರ ವ್ಯವಹಾರ ನಡೆಸಿದೆ ಮತ್ತು ರಹಸ್ಯ ದಾಖಲೆಗಳನ್ನು ಹಸ್ತಾಂತರಿಸಿದೆ ಎಂದು ವಿವರಿಸಿದ್ದರು.

ಇದೀಗ ನ್ಯಾಯಾಲಯವೂ ಖಾನ್ ಅವರಿಗೆ ನೊಟೀಸ್ ಜಾರಿ ಮಾಡಿದ್ದು, ಜನವರಿ 25ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ