ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕನ್ನರನ್ನೇ ಸೆಳೆಯುತ್ತಿದೆ ಅಲ್‌ಖೈದಾ; ದೊಡ್ಡಣ್ಣನಿಗೆ ಕಳವಳ (America | al-Qaeda | Islam | Yemen)
Bookmark and Share Feedback Print
 
ಅಮೆರಿಕಾ ಪ್ರಜೆಗಳನ್ನೇ ಭಯೋತ್ಪಾದಕ ಚಟುವಟಿಕೆ ನಡೆಸಲು ನೇಮಕಾತಿ ಮಾಡಿಕೊಳ್ಳುತ್ತಿರುವ ಅಲ್‌ಖೈದಾದ ಇತ್ತೀಚಿನ ತಂತ್ರಗಳಿಂದ ವಿಶ್ವದ ದೊಡ್ಡಣ್ಣನಿಗೆ ಕಳವಳಗಳು ಹೆಚ್ಚಾಗಿದ್ದು, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ಜೈಲಿನಲ್ಲಿದ್ದ ಸಂದರ್ಭದಲ್ಲಿ ಸುಮಾರು 40ರಷ್ಟು ಅಮೆರಿಕಾ ಖೈದಿಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ಅವರು ಅಲ್‌ಖೈದಾದಿಂದ ತರಬೇತಿ ಪಡೆಯಲು ಯೆಮನ್‌ಗೆ ತೆರಳಿದ್ದಾರೆ. ಇಂತವರಿಂದ ಸಂಭಾವ್ಯ ದಾಳಿ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಅಮೆರಿಕಾ ಪಾಸ್‌ಪೋರ್ಟ್ ಹೊಂದಿರುವ ಭಯೋತ್ಪಾದಕರಿಂದ ಬರುತ್ತಿರುವ ಬೆದರಿಕೆಗಳು ದಿನೇದಿನೇ ಹೆಚ್ಚಾಗುತ್ತಿದೆ. ಇಂತಹ ತವರಿನಲ್ಲೇ ಹುಟ್ಟಿಕೊಂಡಿರುವ ಪತ್ತೆ ಹಚ್ಚುವುದು ಮತ್ತು ತಡೆಯುವುದು ಇದೀಗ ಅಮೆರಿಕಾ ಆಡಳಿತಕ್ಕೆ ಪ್ರಮುಖ ಸವಾಲಾಗಿದೆ ಎಂದು ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿ ತನ್ನ ನೂತನ ವರದಿಯಲ್ಲಿ ಹೇಳಿದೆ.

ಯೆಮನ್ ಮೂಲದ ಅರೇಬಿಯನ್ ಪೆನಿನ್ಸುಲಾದಲ್ಲಿನ ಅಲ್‌ಖೈದಾವನ್ನೂ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕಾ ಹೆಸರಿಸಿದ ನಂತರ ಅದರ ನಾಯಕರ ವಿರುದ್ಧವೂ ಸಮಿತಿ ಕಠಿಣ ವಿಧಾನಗಳನ್ನು ಅನುಸರಿಸಲಿದೆ.

ಈ ಸಂಘಟನೆಯ ಅಗ್ರ ನಾಯಕರಾದ ನಾಸಿರ್ ಆಲ್ ವಹಿಶಿ ಮತ್ತು ಸೈಯದ್ ಅಲ್ ಶಿಹ್ರಿಯವರನ್ನು ಭಯೋತ್ಪಾದಕರು ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೆಸರಿಸಿದ್ದಾರೆಂದು ಸ್ಟೇಟ್ ಇಲಾಖೆಯು ಹೇಳಿದೆ.

ಅಲ್ಲದೆ ಈ ಸಂಘಟನೆಯ ಮತ್ತು ಅದರ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ವಿಶ್ವಸಂಸ್ಥೆಯ ಭದ್ರತಾ ಸಮಿತಿಗೂ ಅಮೆರಿಕಾ ತನ್ನ ಪ್ರಸ್ತಾವನೆ ಸಲ್ಲಿಸಲಿದೆ.

ಅಮೆರಿಕಾ ಮತ್ತು ಇತರೆಡೆ ದಾಳಿಗಳನ್ನು ನಡೆಸಲು ಅರಬ್ಬರು, ಅಫ್ಘನ್ನರು ಮತ್ತು ಪಾಕಿಸ್ತಾನಿರ ಜತೆಗೆ ಇತ್ತೀಚಿನ ದಿನಗಳಲ್ಲಿ ಅಮೆರಿಕಾ ಪ್ರಜೆಗಳನ್ನೂ ನೇಮಿಸುವತ್ತ ಅಲ್‌ಖೈದಾ ಹಲವು ಹೆಜ್ಜೆಗಳನ್ನಿಟ್ಟಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಐವರು ಅಮೆರಿಕಾ ಪ್ರಜೆಗಳು ಭಯೋತ್ಪಾದನಾ ಕೃತ್ಯಕ್ಕಾಗಿ ಹೊಂಚು ಹಾಕುತ್ತಿದ್ದಾಗ ಸಿಕ್ಕಿ ಬಿದ್ದಿರುವುದೇ ಇದಕ್ಕೆ ಸಿಕ್ಕಿರುವ ತಾಜಾ ಪುರಾವೆ.
ಸಂಬಂಧಿತ ಮಾಹಿತಿ ಹುಡುಕಿ