ಭಾರತ-ಪಾಕ್; ಚೀನಾ ಮಧ್ಯಸ್ಥಿಕೆ ವಹಿಸ್ಲಿ: ಬ್ಲ್ಯಾಂಕ್ ಚೆಕ್ ನೀಡ್ತೇವೆ
ಬೀಜಿಂಗ್, ಮಂಗಳವಾರ, 23 ಫೆಬ್ರವರಿ 2010( 18:49 IST )
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಚೀನಾ ಮಧ್ಯಸ್ಥಿಕೆ ವಹಿಸುವುದಾದರೆ ಪಾಕಿಸ್ತಾನ ಚೀನಾಕ್ಕೆ 'ಬ್ಲ್ಯಾಂಕ್ ಚೆಕ್' ನೀಡುವುದಾಗಿ ಮಂಗಳವಾರ ಘೋಷಿಸಿದ್ದು, ಆ ನೆಲೆಯಲ್ಲಿ ಉಭಯ ರಾಷ್ಟ್ರಗಳ ವಿವಾದ ಬಗೆಹರಿಸುವಲ್ಲಿ ಚೀನಾ ಮದ್ಯವರ್ತಿಯಾಗುವುದು ಸೂಕ್ತವೇ ಎಂಬ ಬಗ್ಗೆ ಭಾರತ ನಿರ್ಧರಿಸಲಿ ಎಂದು ಸಂದೇಶ ನೀಡಿದೆ.
ಚೀನಾದಲ್ಲಿ ಇಂಟರ್‌ನ್ಯಾಷನಲ್ ಸ್ಟಡೀಸ್ ಸಂಸ್ಥೆಯಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ, ಭಾರತ ಮತ್ತು ಪಾಕಿಸ್ತಾನ ನಡುವಿನ ವೈಮನಸ್ಸನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ಚೀನಾ ಯಾವುದೇ ಪಾತ್ರವಹಿಸುವುದನ್ನು ಕೂಡ ಪಾಕಿಸ್ತಾನ ತುಂಬು ಹೃದಯದಿಂದ ಸ್ವಾಗತಿಸುವುದಾಗಿ ಹೇಳಿದರು.
ಆದರೆ ಉಭಯ ದೇಶಗಳ ನಡುವಿನ ವೈಮನಸ್ಸನ್ನು ಬಗೆಹರಿಸುವಲ್ಲಿ ಚೀನಾದ ಮದ್ಯಸ್ಥಿಕೆ ಉತ್ತಮವಾದುದೇ ಎಂಬ ಬಗ್ಗೆ ಭಾರತ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು. ಆದರೂ ಚೀನಾ ಮದ್ಯಸ್ಥಿಕೆಗೆ ಒಪ್ಪುವುದಾದರೆ ಪಾಕಿಸ್ತಾನ ಬ್ಲ್ಯಾಂಕ್ ಚೆಕ್ ನೀಡುವುದಾಗಿ ತಿಳಿಸಿದರು.
ಖುರೇಷಿಯ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ, ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಚೀನಾಕ್ಕೆ ಮುಖ್ಯವಾದ ಆಪ್ತ ನೆರೆಹೊರೆಯ ದೇಶಗಳಾಗಿವೆ ಎಂದರು. ಅಲ್ಲದೇ, ಭಾರತ ಮತ್ತು ಪಾಕಿಸ್ತಾನ ನಡುವಿನ ಬಾಂಧವ್ಯ ವೃದ್ದಿಯನ್ನು ಚೀನಾ ಸ್ವಾಗತಿಸುವುದಾಗಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.