ಕಾರ್ ಬಾಂಬ್ ಸ್ಫೋಟ ಮತ್ತು ಆತ್ಮಾಹುತಿ ದಾಳಿಗಳ ನಂತರ ಇದೀಗ ಭಯೋತ್ಪಾದಕರು ಕಂಡುಕೊಂಡಿರುವ ಮತ್ತೊಂದು ಹಾದಿಯಿದು. ಹೊಸ ಪ್ರಯೋಗಕ್ಕೆ ಮುಂದಾಗಿರುವ ಉಗ್ರರು ಕತ್ತೆ ಬಾಂಬ್ ಸ್ಫೋಟಿಸಿದ್ದಾರೆ.
ಅಫಘಾನಿಸ್ತಾನದ ದಕ್ಷಿಣ ಕಂದಹಾರ್‌ನಲ್ಲಿ ಸೋಮವಾರ ಕತ್ತೆಯ ಹಿಂದುಗಡೆ ಬಚ್ಚಿಟ್ಟಿದ್ದ ಬಾಂಬನ್ನು ಸ್ಫೋಟಿಸಿದ ಪರಿಣಾಮ ಮೂವರು ಮಕ್ಕಳು ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್ ಸ್ಫೋಟವು ಅಧ್ಯಕ್ಷ ಹಮೀದ್ ಕರ್ಜಾಯ್‌ಗೆ ರಕ್ಷಣೆ ಒದಗಿಸುತ್ತಿರುವ ಪೊಲೀಸರ ಮನೆಯ ಸಮೀಪ ಸಂಭವಿಸಿದೆ. ಘಟನೆ ನಡೆದ ಸ್ಥಳದ ಸಮೀಪವೇ ಹಲವಾರು ಸರಕಾರಿ ಕಟ್ಟಡಗಳಿವೆ.
ಘಟನೆಯ ಸಾವಿಗೀಡಾದವರು ಇಲ್ಲಿನ ಬುಡಕಟ್ಟು ಮುಖಂಡ ಫೈಸುಲುದ್ದೀನ್ ಸಹೋದರರ ಮಕ್ಕಳು. ಅಲ್ಲದೆ ಗಾಯಗೊಂಡವರಲ್ಲಿ ಫೈಸಲುದ್ದೀನ್ ಮನೆಗೆ ರಕ್ಷಣೆ ಒದಗಿಸುತ್ತಿರುವ ಇಬ್ಬರು ಪೊಲೀಸರು ಹಾಗೂ ಮೂವರು ಪಾದಚಾರಿಗಳು ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.