ಸಿಖ್ ಸಮುದಾಯದ ಒಳಪಂಗಡವೊಂದು ಆಯುಧಗಳೊಂದಿಗೆ ಕೆನಡಾದ ಬ್ರಾಂಪ್ಟನ್ ಗುರು ನಾನಕ್ ಸಿಖ್ ಗುರುದ್ವಾರದೊಳಕ್ಕೆ ನುಗ್ಗಿದ ಪರಿಣಾಮ ಇತ್ತಂಡಗಳ ನಡುವೆ ಹಿಂಸಾಚಾರ ನಡೆದ ಪರಿಣಾಮ ಹಲವಾರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಗುರುದ್ವಾರದ ಆವರಣದೊಳಗೆ ಹಿಂಸಾಚಾರ ನಡೆದ ಪರಿಣಾಮ ಘಟನೆಯಲ್ಲಿ 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಗುರುದ್ವಾರದೊಳಗೆ ಸಾಮಾನ್ಯ ಸಭೆ ನಡೆಯುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಸಿಖ್ ಗುಂಪೊಂದು ಆಯುಧದೊಂದಿಗೆ ಒಳ ಪ್ರವೇಶಿಸಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಆರಂಭದಲ್ಲಿ ಪೊಲೀಸರು ಕೂಡ ಹಿಂಸಾಚಾರ ನಡೆದಾಗ ಮಧ್ಯಪ್ರವೇಶಿಸಿಲ್ಲವಾಗಿತ್ತು. ನಂತರ ಪರಿಸ್ಥಿತಿ ಮಿತಿಮೀರಿದಾಗ ಮೂರು ಮಂದಿಯನ್ನು ಬಂಧಿಸಿ, ಮಾರಕ ಆಯುಧಗಳೊಂದಿಗೆ ಆಗಮಿಸಿ ಹಲ್ಲೆ ನಡೆಸಿದ ವಿರುದ್ಧ ದೂರು ದಾಖಲಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಯಾವುದೇ ಕಾರಣಕ್ಕೂ ಹಿಂಸಾಚಾರ ಪ್ರವೃತ್ತಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದು ಕಾನೂನಿಗೆ ವಿರುದ್ಧವಾದದ್ದು ಎಂದಿರುವ ಪೊಲೀಸ್ ವಕ್ತಾರ ಸಾಮಂತಾ ನುಲ್ಲೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಟೊರಾಂಟೋ ಪ್ರದೇಶದಲ್ಲಿ ನಡೆದ ಎರಡನೇ ದೊಡ್ಡ ಸಿಖ್ ಹಿಂಸಾಚಾರ ಇದಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕೆನಡಾದ ಬ್ರಾಂಪ್ಟನ್ ಪ್ರದೇಶದ ಮತ್ತೊಂದು ಗುರುದ್ವಾರದಲ್ಲಿ ಮೂರು ವಾರಗಳ ಹಿಂದಷ್ಟೇ ಪ್ರಮುಖ ಸಿಖ್ ವಕೀಲ ಮಂಜಿತ್ ಸಿಂಗ್ ಮಂಗತ್ ಎಂಬವರನ್ನು ಚೂರಿಯಿಂದ ಇರಿಯಲಾಗಿತ್ತು. ಈ ಸಂದರ್ಭದಲ್ಲಿಯೂ ದೊಡ್ಡ ಹಿಂಸಾಚಾರ ನಡೆದಿತ್ತು.