ತಾನೇ ಮಾರ್ಪಡಿಸಿದ ಮಕ್ಕಳ ಆಟದ ಕಾರನ್ನು ಚಾಲನೆ ಮಾಡುತ್ತಿದ್ದ 40ರ ಹರೆಯದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಎಸೆಕ್ಸ್ ಪೊಲೀಸರು, ಕುಡಿತದ ಚಾಲನೆ ಎಂದು ಪ್ರಕರಣ ದಾಖಲಿಸಿದ್ದು ಅವರೀಗ ಮೂರು ವರ್ಷಗಳ ವಾಹನ ಚಾಲನೆ ನಿಷೇಧ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.
ನಾಲ್ಕು ಮಕ್ಕಳ ತಂದೆ ಹಾಗೂ ವಿಚ್ಛೇದಿತ ಪೌಲ್ ಹಟಾನ್ ನಾಲ್ಕು ಅಡಿ ಉದ್ದದ ಬ್ಯಾಟರಿ ಚಾಲಿತ ಕಾರನ್ನು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬೆನ್ನು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅಲ್ಪ ಪ್ರಮಾಣದ ಬಿಯರ್ ಕುಡಿದಿದ್ದರು. ಅದನ್ನೇ ಮುಂದಿಟ್ಟುಕೊಂಡು ಕೇಸು ಜಡಿದು ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ನಂತರ ಕೊಲ್ಚೆಸ್ಟರ್ ಮ್ಯಾಜಿಸ್ಟ್ರೇಟ್ ಅವರೆದುರು ಆರೋಪಿಯನ್ನು ಹಾಜರುಪಡಿಸಲಾಯಿತು. ಪುಟ್ಟ ಕಾರನ್ನು ಚಲಾಯಿಸುತ್ತಿದ್ದಾಗ ತಾನು ಪಾನಮತ್ತನಾಗಿರುವುದು ಹೌದು ಎಂದು ಒಪ್ಪಿಕೊಂಡ ಹಟಾನ್ ಅವರಿಗೆ ಮೂರು ವರ್ಷಗಳ ವಾಹನ ಚಾಲನೆ ನಿಷೇಧ ಹೇರಲಾಯಿತು.
ಆರ್ಎಎಫ್ ಏರೋನ್ಯಾಟಿಕಲ್ ಮಾಜಿ ಇಂಜಿನಿಯರ್ ಆಗಿರುವ ಈ ವ್ಯಕ್ತಿ, ತನ್ನ 17ರ ಹರೆಯದ ಪುತ್ರನ ಜತೆ ಕಳೆದ ಹಲವಾರು ವರ್ಷಗಳಿಂದ ಮಕ್ಕಳ ಕಾರನ್ನು ಅಭಿವೃದ್ಧಿಪಡಿಸುವಲ್ಲಿ ಶ್ರಮಿಸುತ್ತಿದ್ದರು. ಮೂಲ ವಾಹನದಲ್ಲಿದ್ದ ಪುಟ್ಟ ಚಕ್ರಗಳನ್ನು ತೆಗೆದು ದೊಡ್ಡದಾದ ಚಕ್ರಗಳನ್ನೂ ಅಳವಡಿಸಿದ್ದರು. ಆದರೂ ವಾಹನದ ಆಕಾರ ಬದಲಾಗಿರಲಿಲ್ಲ. ಅದರೊಳಗೆ ವಯಸ್ಕರು ಕುಳಿತುಕೊಳ್ಳಲು ಪ್ರಯಾಸಪಡಬೇಕಾಗಿತ್ತು.
ತನ್ನ ವಿರುದ್ಧವೇ ಪ್ರಕರಣ ದಾಖಲಾಗಿರುವುದರಿಂದ ಹಟಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂರರಿಂದ ಐದು ವರ್ಷದ ಮಕ್ಕಳಿಗಾಗಿ ತಯಾರಿಸಲಾಗಿರುವ ಈ ವಾಹನ ಎಷ್ಟೇ ವೇಗವಾಗಿ ಹೋದರೂ ಅದು ನಡಿಗೆಗಿಂತ ವೇಗವಾಗಿರುವುದಿಲ್ಲ. ಹಾಗಿದ್ದೂ ನನ್ನ ಮೇಲೆ ವಾಹನ ಚಾಲನೆಯ ನಿಷೇಧ ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ.
12 ವೋಲ್ಟ್ ಬ್ಯಾಟರಿ ಹೊಂದಿರುವ ಈ ಮಕ್ಕಳ ವಾಹನ ಗಂಟೆಗೆ 6.5 ಕಿಲೋ ಮೀಟರ್ ವೇಗದಲ್ಲಷ್ಟೇ ಸಾಗುತ್ತದೆ.