ತಲೆಮರೆಸಿಕೊಂಡಿರುವ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯ ವರಿಷ್ಠ ಒಸಾಮಾ ಬಿನ್ ಲಾಡೆನ್‌ನನ್ನು ಜೀವಂತವಾಗಿ ಸೆರೆ ಹಿಡಿಯುವುದು ಅಥವಾ ಕೊಲ್ಲುವುದು ಅಮೆರಿಕದ ಪ್ರಮುಖ ಆದ್ಯತೆಯಾಗಿದೆ ಎಂದು ಶ್ವೇತಭವನ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ವಿಶ್ವದ ಮೋಸ್ಟ್ ವಾಂಟೆಡ್ ಉಗ್ರನಾಗಿರುವ ಲಾಡೆನ್‌ನನ್ನು ಸೆರೆ ಹಿಡಿಯುವುದು ಅಥವಾ ಸಾಯಿಸುವುದು ಅಮೆರಿಕದ ಪ್ರಮುಖ ಗುರಿಯಾಗಿದೆ ಎಂದು ಅಮೆರಿಕ ಹೇಳಿದೆ. ಅಲ್ ಖಾಯಿದಾ ಸಂಘಟನೆಯ ಹಲವಾರು ಪ್ರಮುಖ ಮುಖಂಡರನ್ನು ಸೆರೆ ಹಿಡಿಯುವಲ್ಲಿ ಅಮೆರಿಕ ಯಶಸ್ವಿಯಾಗಿರುವುದಾಗಿಯೂ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ರೋಬೆರ್ಟ್ ಗಿಬ್ಸ್ ತಿಳಿಸಿದ್ದಾರೆ.
ಅಲ್ ಖಾಯಿದಾ ಸಂಘಟನೆಯ ಪ್ರಮುಖರನ್ನು ಸೆರೆ ಹಿಡಿಯುವ ಬಗ್ಗೆ ಅಮೆರಿಕ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಇರಾಕ್‌ನಲ್ಲಿ ತಳವೂರಿರುವ ಅಲ್ ಖಾಯಿದಾ ಉಗ್ರರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಇಂದಿನ ಸಭೆಯಲ್ಲಿ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಇಡೀ ವಿಶ್ವಕ್ಕೆ ಅಪಾಯಕಾರಿಯಾಗಿ ಬೆಳದಿದೆ. ಆ ನಿಟ್ಟಿನಲ್ಲಿ ಅಲ್ ಖಾಯಿದಾದ ಇಬ್ಬರು ವರಿಷ್ಠರಾದ ಒಸಾಮಾ ಮತ್ತು ಐಮನ್ ಜವಾಹರಿಯನ್ನು ಜೀವಂತವಾಗಿ ಸೆರೆ ಹಿಡಿಯುವುದು ಅಥವಾ ಕೊಲ್ಲುವುದು ಅಮೆರಿಕದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಗಿಬ್ಸ್ ಹೇಳಿದ್ದಾರೆ.