ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ಸರಕಾರವನ್ನು ಉರುಳಿಸಲು ಸಜ್ಜಾಗಿರುವ ಪಾಕಿಸ್ತಾನದ ತೆಹ್ರೀಕ್-ಇ-ತಾಲಿಬಾನ್, ಅಮೆರಿಕ ಸೇರಿದಂತೆ ಅನ್ಯ ರಾಷ್ಟ್ರಗಳ ಮೇಲೆ ದಾಳಿಗೂ ಯೋಜಿಸಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ತಿಳಿಸಿದ್ದಾರೆ.
'ಈಗ ಹೊಸದೊಂದು ವಿದ್ಯಮಾನ ಘಟಿಸುತ್ತಿದೆ. ಪಾಕಿಸ್ತಾನೀ ತಾಲಿಬಾನ್ ಸಂಘಟನೆಯು ಪಾಕ್ ಸರಕಾರ ಉರುಳಿಸಲು ಯೋಜಿಸುತ್ತಿರುವುದಷ್ಟೇ ಅಲ್ಲ, ನಮ್ಮ ಮೇಲೂ ದಾಳಿಗೆ ತಂತ್ರ ರೂಪಿಸುತ್ತಿದೆ' ಎಂದು ಪೆಂಟಗಾನ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೇಟ್ಸ್ ಹೇಳಿದರು.
ಒಂದೂವರೆ ವರ್ಷದ ಹಿಂದೆ ಪಾಕಿಸ್ತಾನೀ ತಾಲಿಬಾನ್ ಸಂಘಟನೆಯು ಇಸ್ಲಾಮಾಬಾದ್ ತಲುಪಿದ್ದಾಗಲೇ ಇದು ಅಪಾಯಕಾರಿ ಮತ್ತು ಪಾಕ್ ಸರಕಾರದ ಅಸ್ತಿತ್ವಕ್ಕೇ ಸಂಚಕಾರ ಎಂಬುದು ಪಾಕಿಸ್ತಾನೀಯರಿಗೆ ಮನದಟ್ಟಾಗಬೇಕಿತ್ತು ಎಂದು ಅವರು ನುಡಿದರು.