ಸಯೀದ್ ವಿರುದ್ಧ ಪಾಕ್‌ನಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ:ಕೃಷ್ಣ
ಬೆಂಗಳೂರು, ಶುಕ್ರವಾರ, 28 ಮೇ 2010( 19:45 IST )
ಮುಂಬೈ ಉಗ್ರರ ದಾಳಿಯಲ್ಲಿ ಭಾಗಿಯಾದ ಲಷ್ಕರ್-ಎ.ತೊಯಿಬಾ ಸಂಘಟನೆಯ ಹಾಗೂ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಅವರನ್ನು ಬಿಡುಗಡೆಗೊಳಿಸಿರುವ ಪಾಕ್ ನ್ಯಾಯಾಲಯದ ನಿರ್ಧಾರದಿಂದ ನಿರಾಶೆಯಾಗಿದ್ದು, ಮುಂಬೈ ದಾಳಿಯಲ್ಲಿ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ನೀಡಲಾಗಿತ್ತು ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಪಾಕಿಸ್ತಾನದ ಅಪೆಕ್ಸ್ ನ್ಯಾಯಾಲಯ ಕೇಂದ್ರ ಸರಕಾರ ಹಾಗೂ ಪಂಜಾಬ್ ಸರಕಾರಗಳ ಮನವಿಯನ್ನು ತಳ್ಳಿಹಾಕಿ ಹಫೀಜ್ ಸಯೀದ್ ಅವರನ್ನು ಬಿಡುಗಡೆಗೊಳಿಸಿರುವುದು ಸಹಜವಾಗಿ ನಿರಾಶೆ ಮೂಡಿಸಿದೆ. ಹಫೀಜ್ ಸಯೀದ್ ಮುಂಬೈ ದಾಳಿಯ ರೂವಾರಿ ಎಂದು ನಾವು ಇವತ್ತಿಗೂ ನಂಬುತ್ತೆವೆ ಎಂದು ತಿಳಿಸಿದ್ದಾರೆ.
ನಾವು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಪಾಕಿಸ್ತಾನಕ್ಕೆ ನೀಡಿದ್ದೇವೆ.ನಮ್ಮ ಕಾನೂನು ತಜ್ಞರು ನಾವು ಒದಗಿಸಿದ ಸಾಕ್ಷ್ಯಾಧಾರಗಳಿಂದ ಸಯೀದ್ ಅವರನ್ನು ಶಿಕ್ಷಿಸಬಹುದಾಗಿದೆ ಎಂದು ಹೇಳಿದ್ದಾರೆ. ಆದರೆ ಪಾಕ್‌ನ ಅಪೆಕ್ಸ್ ನ್ಯಾಯಾಲಯ ತನ್ನಲ್ಲಿರುವ ಸಾಕ್ಷ್ಯಾಧಾರಗಳ ಮೇಲೆ ಬಿಡುಗಡೆಗೊಳಿಸಿದೆ ಎಂದು ಕೃಷ್ಣ ಹೇಳಿದ್ದಾರೆ.
ಲಷ್ಕರ್ ಹಾಗೂ ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್, ಬಹಿರಂಗವಾಗಿ ಭಾರತದ ವಿರುದ್ಧ ಜಿಹಾದ್ ಸಾರುವುದಾಗಿ ಹೇಳಿದ್ದಾರೆ.ವಿಶ್ವಸಂಸ್ಥೆಯ ಭದ್ರತಾ ಸಮಿತಿ ಆತನನ್ನು ಭಯೋತ್ಪಾದಕ ಎಂದು ಘೋಷಿಸಿದೆ ಎಂದು ಪಾಕ್ ನ್ಯಾಯಾಲಯದ ತೀರ್ಪಿನ ಬಗ್ಗೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.