ದಕ್ಷಿಣ ಕೆರೊಲಿನಾ ರಾಜ್ಯಪಾಲ ಹುದ್ದೆಗಾಗಿ ಸ್ಪರ್ಧಿಸುತ್ತಿರುವ ಭಾರತೀಯ-ಅಮೆರಿಕನ್ ಮಹಿಳೆ ನಿಕ್ಕಿ ಹಾಲೆಯವರ ವಿರುದ್ಧ ಅಮೆರಿಕಾ ಸೆನೆಟರ್ ಒಬ್ಬರು ಜನಾಂಗೀಯ ನಿಂದನೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಜೇಕ್ ನಾಟ್ಸ್ ಎಂಬ ರಿಪಬ್ಲಿಕನ್ ಸ್ಟೇಟ್ ಪುರುಷ ಸೆನೆಟರ್ 'ರಾಗ್‌ಹೆಡ್' (raghead) ಎಂದು ನಿಕ್ಕಿ ಹಾಲೆಯವರನ್ನು ಜರೆದಿದ್ದಾರೆ ಎಂದು ವರದಿಗಳು ಹೇಳಿವೆ.
ಹಾಲೆಯವರ ವಿರುದ್ಧ ದಾಳಿ ನಡೆಸಿರುವ ಜತೆಗೆ ಸೆನೆಟರ್ ಅಧ್ಯಕ್ಷ ಬರಾಕ್ ಒಬಾಮಾ ವಿರುದ್ಧವೂ ಕಿಡಿ ಕಾರುವ ಹೇಳಿಕೆಗಳನ್ನು ನೀಡಿದ್ದಾರೆ. ಒಬಾಮಾ ಅವರ ಇಂಟರ್ನೆಟ್ ರಾಜಕೀಯ ಪ್ರದರ್ಶನವನ್ನು ಅವರು ಪಬ್ ರಾಜಕೀಯ ಎಂದು ಹೀಗಳೆದಿದ್ದಾರೆ.
ನಿಕ್ಕಿ ಹಾಲೆಯವರ ಮೂಲ ಹೆಸರು ನಮೃತಾ ರಾಂಧವಾ. ದಕ್ಷಿಣ ಕೆರೊಲಿನಾದ ಬಾಂಬರ್ಗ್‌ನಲ್ಲಿ ಅವರು ಡಾ. ಅಜಿತ್ ಮತ್ತು ರಾಜ್ ರಾಂಧವಾ ಅವರಿಗೆ ಜನಿಸಿದ್ದರು. ಹಾಲೆಯವರ ಹೆತ್ತವರು ಭಾರತದ ಅಮೃತಸರದಿಂದ ವಲಸೆ ಬಂದವರು. ಪ್ರಸಕ್ತ ತಾನು ಯಾವುದೇ ಧರ್ಮೀಯಳೆಂದು ಕರೆಸಿಕೊಳ್ಳಲು ನಿರಾಕರಿಸುವ ಹಾಲೆ, ತಾನು ವಿಧಾನವಾದಿ (Methodist) ಎಂದು ಹೇಳಿಕೊಳ್ಳುತ್ತಿದ್ದಾರೆ.
ಸೆನೆಟರ್ ಬಳಸಿರುವ ರಾಗ್‌ಹೆಡ್ ಎಂಬ ಜನಾಂಗೀಯ ನಿಂದನೆಯನ್ನು ಸೂಚಿಸುವ ಪದವನ್ನು ಅರಬ್ಬರು, ಸಿಖ್ಖರು ಅಥವಾ ಟರ್ಬಾನ್ ಧರಿಸುವ ಜನಾಂಗಗಳ ವಿರುದ್ಧ ಬಳಸಲಾಗುತ್ತದೆ.
ನಾವು ಈಗಾಗಲೇ ಒಂದು ರಾಗ್‌ಹೆಡ್‌ನ್ನು ಶ್ವೇತಭವನದಲ್ಲಿ ಹೊಂದಿದ್ದೇವೆ. ರಾಜ್ಯಪಾಲರ ಭವನದಲ್ಲಿ ನಮಗೆ ಇನ್ನೊಂದು ರಾಗ್‌ಹೆಡ್ ಬೇಕಾಗಿಲ್ಲ ಎಂದು ಸೆನೆಟರ್ ನಾಟ್ಸ್ ಹೇಳಿದ್ದಾರೆಂದು ದಕ್ಷಿಣ ಕೆರೊಲಿನಾದ 'ದಿ ಸ್ಟೇಟ್' ಪತ್ರಿಕೆ ವರದಿ ಮಾಡಿತ್ತು.
ವರದಿಗಳ ಪ್ರಕಾರ 65ರ ಹರೆಯದ ನಾಟ್ಸ್ ಅವರು ಹಾಲೆಯವರ ಹೆತ್ತವರ ಧರ್ಮ ಮತ್ತು ಅವರ ಕುಟುಂಬದ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
ಅದೇ ಹೊತ್ತಿಗೆ ತನ್ನ ಹೇಳಿಕೆಯ ಬಗ್ಗೆ ಕ್ಷಮೆ ಯಾಚಿಸಲು ಸಿದ್ಧ ಎಂದು ಇದೀಗ ನಾಟ್ಸ್ ಹೇಳಿದ್ದಾರೆ.
ಒಬಾಮಾ ಮತ್ತು ಹಾಲೆಯವರ ಬಗೆಗಿನ ನನ್ನ ರಾಗ್‌ಹೆಡ್ ಹೇಳಿಕೆಗಳು ಕೇವಲ ಹಾಸ್ಯದ ಲೇಪನವನ್ನು ಮಾತ್ರ ಹೊಂದಿದ್ದವು. ಇದಕ್ಕಾಗಿ ನಾನು ಕ್ಷಮೆ ಯಾಚಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.