ಮೂರು ವರ್ಷಗಳ ಹಿಂದೆ ಗಾಜಾ ಪಟ್ಟಿಯೊಳಗೆ ಕೆಲವು ಆಹಾರ ವಸ್ತುಗಳನ್ನು ಸಾಗಿಸಲು ಇಸ್ರೇಲ್ ಹೇರಿದ್ದ ನಿಷೇಧವನ್ನು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಹಿಂದಕ್ಕೆ ಪಡೆದುಕೊಂಡಿದ್ದು, ಇದೀಗ ಅವಕಾಶ ನೀಡಲಾಗಿದೆ ಎಂದು ಇಸ್ರೇಲ್ ಮತ್ತು ಪಾಲೆಸ್ತೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಡಾ, ಜ್ಯೂಸ್, ಜಾಮ್, ಮಸಾಲೆ ಪದಾರ್ಥಗಳು, ಶೇವಿಂಗ್ ಕ್ರೀಮ್, ಚಿಪ್ಸ್, ಕುಕೀಸ್ ಮತ್ತು ಸಿಹಿ ತಿಂಡಿಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ಇಸ್ರೇಲ್ ಹಿಂದಕ್ಕೆ ಪಡೆದುಕೊಂಡಿದೆ ಎಂದು ಪಾಲೆಸ್ತೇನ್ ಅಧಿಕಾರಿ ರಯೇದ್ ಫತೋಹ್ ತಿಳಿಸಿದ್ದಾರೆ. ಕೆಲವು ವಸ್ತುಗಳು ಬುಧವಾರವೇ ಗಾಜಾ ಪಟ್ಟಿಯೊಳಗೆ ಕಳುಹಿಸಲಾಗಿದೆ ಎಂದೂ ಅವರು ವಿವರಣೆ ನೀಡಿದ್ದಾರೆ.
ಗಾಜಾ ಪಟ್ಟಿಯನ್ನು ಹಮಾಸ್ ಭಯೋತ್ಪಾದಕರು ವಶಕ್ಕೆ ತೆಗೆದುಕೊಂಡ ನಂತರ ಇಸ್ರೇಲ್ ಈ ನಿರ್ಬಂಧವನ್ನು ಹೇರಿತ್ತು. ಈ ನಿರ್ಬಂಧವನ್ನು ಉಲ್ಲಂಘಿಸಲು ಯತ್ನಿಸಿದ್ದ ಪಾಲೆಸ್ತೇನ್ ಪರ 'ಫ್ರೀಡಂ ಪ್ಲೋಟಿಲ್ಲಾ' ಕಾರ್ಯಕರ್ತರು ಸಾಗುತ್ತಿದ್ದ ಹಡಗಿನ ಮೇಲೆ ಇಸ್ರೇಲ್ ಮಾರಕ ದಾಳಿ ನಡೆಸಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.
ಈ ದಾಳಿಯ ಕುರಿತು ಅಂತಾರಾಷ್ಟ್ರೀಯ ಮಟ್ಟದ ತನಿಖೆ ಆರಂಭವಾಗಲಿದ್ದು, ಈ ಸಂಬಂಧ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಇಸ್ರೇಲ್ ಈ ಕ್ರಮಕ್ಕೆ ಮುಂದಾಗಿದೆ. ಆದರೆ ಈ ನಡೆಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.