ಗಾಜಾ ಪಟ್ಟಿಗೆ ತೆರಳುತ್ತಿದ್ದ ಸಹಾಯಕ ಹಡಗಿನ ಮೇಲೆ ಕಳೆದ ವಾರ ನಡೆಸಿದ್ದ ದಾಳಿ ಲೋಪವೆಂದು ಇಸ್ರೇಲ್ ಉಪ ಪ್ರಧಾನಿ ಹಾಗೂ ತಾಂತ್ರಿಕ ವ್ಯವಹಾರಗಳ ಸಚಿವ ಮೋಶೆ ಯಾಲೊನ್ ಒಪ್ಪಿಕೊಂಡಿದ್ದಾರೆ.
ಶ್ಲಾಘಿಸಬೇಕಾದ ಕಾರ್ಯವೊಂದು ಕೆಲವರ ಅಸಮರ್ಪಕ ಕಾರ್ಯ ವಿಧಾನದ ಮೂಲಕ ವಿಫಲವಾಗಿದೆ ಎಂಜು ಸಿಬ್ಬಂದಿಗಳ ಮಾಜಿ ಸೇನಾ ಮುಖ್ಯಸ್ಥ ಹಾಗೂ ದಾಳಿ ಕಾರ್ಯಾಚರಣೆಯ ದಿನ ಹಂಗಾಮಿ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಸಚಿವ ಯಾಲೊನ್ ಆಡಳಿತ ಪಕ್ಷ 'ಲಿಕುಡ್' ಕೌನ್ಸಿಲ್ ಮುಖ್ಯಸ್ಥರ ಸಭೆಯಲ್ಲಿ ಅಭಿಪ್ರಾಯಪಟ್ಟರು.
ನಿರ್ಧಾರವು ಸರಿಯಾಗಿತ್ತು. ಆದರೆ ಅಲ್ಲಿ ಸುಧಾರಿತ ಕ್ರಮಗಳಿಗಾಗಿ ಅವಕಾಶಗಳಿದ್ದವು. ಅದನ್ನು ವಿವರವಾಗಿ ತಿಳಿಸಲು ನಾನು ಹೋಗುತ್ತಿಲ್ಲ ಎಂದು ಸಚಿವರು ಹೇಳಿದ್ದಾರೆಂದು ಸುದ್ದಿ ವೆಬ್‌ಸೈಟ್ 'ವೈನೆಟ್' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತಾನ್ಯೂಹ್ ದೇಶದ ಹೊರಗಿದ್ದ ಕಾರಣ ಕಾರ್ಯಾಚರಣೆಯ ದಿನ ಯಾಲೊನ್ ಹಂಗಾಮಿ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಸಚಿವರು ತನ್ನ ದೇಶದ ಪಡೆಗಳ ದಿಟ್ಟತನವನ್ನು ಇದೇ ಸಂದರ್ಭದಲ್ಲಿ ಪ್ರಶಂಸಿದ್ದಾರೆ.
ಹಡಗಿನಲ್ಲಿ ಹೋರಾಡಿದ ನಮ್ಮ ಪಡೆಗಳ ಹೋರಾಟ ಮೆಚ್ಚುವಂತದ್ದು ಮತ್ತು ಇದು ಕಠಿಣ ಪರಿಸ್ಥಿತಿಯಲ್ಲಿ ನಡೆದಿತ್ತು. ಕಾರ್ಯಾಚರಣೆಯ ಹಂತ ಮತ್ತು ಯೋಜನೆಯ ಸಂದರ್ಭದಲ್ಲಿ ಕೆಲವು ತಪ್ಪುಗಳು ನಡೆದಿವೆ. ಘಟನೆ ನಡೆಯುವ ಮೊದಲೇ ನಾನು ಇದರ ಕುರಿತು ಎಚ್ಚರಿಕೆಯನ್ನು ನೀಡಿದ್ದೆ ಎಂದು ಸಚಿವರು ಒತ್ತಿ ಹೇಳಿದರು.
ನೌಕಾಪಡೆಯ ದಾಳಿಯ ಕುರಿತು ಔಪಚಾರಿಕ ತನಿಖೆಗಾಗಿ ಈಗಾಗಲೇ ಇಸ್ರೇಲ್ ರಕ್ಷಣಾ ಪಡೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಗಾಬಿ ಅಶ್ಕೆನಾಜಿಯವರು ಆದೇಶ ನೀಡಿರುವುದನ್ನು ಇದೀಗ ಸ್ಮರಿಸಬಹುದಾಗಿದೆ.