ಬ್ರಿಟನ್ ವಲಸಿಗರಿಗೆ ಇನ್ನು ಇಂಗ್ಲೀಷ್ ಪರೀಕ್ಷೆ ಕಡ್ಡಾಯ..!
ಲಂಡನ್, ಬುಧವಾರ, 9 ಜೂನ್ 2010( 17:26 IST )
ಭಾರತ ಮತ್ತು ಯೂರೋಪೇತರ ರಾಷ್ಟ್ರಗಳಿಂದ ಇಂಗ್ಲೆಂಡ್‌ಗೆ ಬರುತ್ತಿರುವ ವಲಸಿಗರನ್ನು ನಿಯಂತ್ರಿಸಲು ಮುಂದಾಗಿರುವ ಡೇವಿಡ್ ಕ್ಯಾಮರೂನ್ ಅವರ ಸರಕಾರವು, ಬ್ರಿಟನ್‌ನಲ್ಲಿನ ತಮ್ಮ ಸಂಗಾತಿಯನ್ನು ಸೇರಿಕೊಳ್ಳಲು ಅಥವಾ ಮದುವೆಯಾಗಲು ಬಯಸುವವರು ಆಂಗ್ಲ ಭಾಷಾ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ ಎಂಬ ನೂತನ ವಲಸೆ ನೀತಿಯನ್ನು ಪ್ರಕಟಿಸಿದೆ.
ಇದೇ ವರ್ಷದ ಸೆಪ್ಟೆಂಬರ್ ತಿಂಗಳಿಂದ ಇದು ಜಾರಿಗೆ ಬರಲಿದೆ. ದೈನಂದಿನ ಜೀವನದಲ್ಲಿ ಬ್ರಿಟನ್‌ನಲ್ಲಿ ಆಂಗ್ಲ ಭಾಷೆ ಸಮಗ್ರ ಭಾಷೆಯಾಗಿರುವ ಕಾರಣ ಮುಂದೆ ವೀಸಾ ಪಡೆದುಕೊಳ್ಳುವ ಮೊದಲು ಪ್ರತಿಯೊಬ್ಬರೂ ಆಂಗ್ಲ ಭಾಷಾ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.
ಈ ನೂತನ ನೀತಿಯು ಗಂಡ ಅಥವಾ ಹೆಂಡತಿ, ಮದುವೆಯಾಗದ ಜೋಡಿಗಳು, ಸಲಿಂಗಿ ಜತೆಗಾರರು ಮತ್ತು ಮದುವೆಯಾಗಬೇಕಾಗಿರುವ ಜೋಡಿಗಳಿಗೆ ಹಾಗೂ ಬ್ರಿಟನ್‌ನಿಂದ ಮತ್ತು ವಿದೇಶಗಳಿಂದ ವೀಸಾಕ್ಕಾಗಿ ಅರ್ಜಿ ಸಲ್ಲಿಸುವವರಿಗೂ ಅನ್ವಯವಾಗುತ್ತದೆ.
ಇಲ್ಲಿ ನೆಲೆಸಲು ಬಯಸುವ ಪ್ರತಿಯೊಬ್ಬರೂ ಇಂಗ್ಲೀಷ್ ಮಾತನಾಡುವ ಅರ್ಹತೆ ಹೊಂದಿರುವುದು ಪೂರ್ವಾಪೇಕ್ಷಿತವಾಗಿರುತ್ತದೆ ಎನ್ನುವುದು ನನ್ನ ಭಾವನೆ. ಈ ನೂತನ ಇಂಗ್ಲೀಷ್ ಕಡ್ಡಾಯ ನೀತಿಯು ಸಂಗಾತಿಗಳಿಗೆ ಸಮನ್ವಯತೆ ಸಾಧಿಸುವುದು, ಸಾಂಸ್ಕೃತಿಕ ಪ್ರತಿಬಂಧಗಳನ್ನು ತೊಡೆದು ಹಾಕುವುದು ಮತ್ತು ಸಾರ್ವಜನಿಕ ಸೇವೆಗಳನ್ನು ಸುರಕ್ಷಿತವಾಗಿಡಲು ಸಹಾಯಕವಾಗುತ್ತದೆ ಎಂದು ಗೃಹ ಕಾರ್ಯದರ್ಶಿ ಥೆರೆಸಾ ಮೇ ತಿಳಿಸಿದ್ದಾರೆ.
ಇದು ಮೊದಲ ಹೆಜ್ಜೆಯಾಗಿದ್ದು, ನಾವು ಪ್ರಸಕ್ತ ಇಂಗ್ಲೀಷ್ ಭಾಷೆಯನ್ನು ವೀಸಾ ವ್ಯವಸ್ಥೆಯಲ್ಲಿ ಅಳವಡಿಸಿ ಕಠಿಣ ನಿಯಮಗಳನ್ನು ಸೇರಿಸುವ ನಿಟ್ಟಿನಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದೇವೆ ಎಂದು ಮೇ ವಿವರಣೆ ನೀಡಿದ್ದಾರೆ.
ಬ್ರಿಟನ್‌ನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಲಸೆಯನ್ನು ಸಮರ್ಥವಾಗಿ ನಿಯಂತ್ರಿಸಲು ನೂತನ ಸರಕಾರವು ಈ ವಿಸ್ತೃತ ವಿಧಾನವನ್ನು ಅನುಸರಿಸುತ್ತಿದೆ. ಜತೆಗೆ ಔದ್ಯೋಗಿಕ ಮತ್ತು ವಿದ್ಯಾರ್ಥಿಗಳ ವೀಸಾಗಳ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ನಮ್ಮ ಇಂದಿನ ಪ್ರಕಟಣೆಯಿಂದ ಸಾಧ್ಯವಾಗುತ್ತದೆ ಎಂದರು.
ಈ ನೂತನ ನಿಯಮದ ಪ್ರಕಾರ ಬ್ರಿಟನ್‌ಗೆ ಬರುವ ಒಬ್ಬನ ಗಂಡ ಅಥವಾ ಹೆಂಡತಿಯು ಇಂಗ್ಲೀಷ್ ಭಾಷೆಯನ್ನು ಸರಾಗವಾಗಿ ಉನ್ನತ ಮಟ್ಟದಲ್ಲಿ ಮಾತನಾಡಲು ಸಾಧ್ಯವಿರಬೇಕು. ಇದು ಔದ್ಯೋಗಿಕ ಕಾರಣಗಳಿಂದ ಬ್ರಿಟನ್‌ಗೆ ಬರುವವರಿಗೂ ಅನ್ವಯವಾಗುತ್ತದೆ.