ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ ರೂವಾರಿಗಳ ವಿರುದ್ಧ ಕ್ರಮ: ಪಾಕ್ ಭರವಸೆ (India | Pakistan | SM Krishna | Mumbai attacks)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿ ರೂವಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಭರವಸೆ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.

ಎರಡು ವರ್ಷಗಳ ನಂತರ ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ಮಾತುಕತೆ ಇಂದು ಆರಂಭಗೊಂಡಿದ್ದು, ಇದನ್ನು ವಿಸ್ತರಿಸಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ. ಮಾತುಕತೆಯಿಂದ ಅತ್ಯುತ್ತಮ ಫಲಿತಾಂಶ ಬಂದಿದೆ, ಶುಭ ಸುದ್ದಿ ಕಾದಿದೆ ಎಂದಷ್ಟೇ ವಿದೇಶಾಂಗ ಕಚೇರಿ ಮೂಲಗಳು ಹೇಳಿವೆ.

ಖುರೇಷಿಯನ್ನು ಭೇಟಿಯಾಗಿರುವ ಸಚಿವ ಕೃಷ್ಣ ಪಾಕ್ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಮತ್ತು ಪ್ರಧಾನಿ ಸೈಯದ್ ಯೂಸುಫ್ ರಾಜಾ ಗಿಲಾನಿಯವರನ್ನು ಭೇಟಿ ಮಾಡಿದ ನಂತರ ಪಾಕ್ ವಿದೇಶಾಂಗ ಸಚಿವರ ಜತೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ.

ಗುರುವಾರ ಬೆಳಿಗ್ಗೆ ಪಾಕಿಸ್ತಾನ ವಿದೇಶಾಂಗ ಕಚೇರಿಯಲ್ಲಿ ಭೇಟಿಯಾದ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಇಬ್ಬರೂ ತಮ್ಮ ಭೋಜನವನ್ನೂ ಇಲ್ಲೇ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನಡೆಸಲಾದ ಮಾತುಕತೆಯ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಲಾಗುತ್ತದೆ ಎಂದಷ್ಟೇ ಹೇಳಲಾಗಿದೆ. ಆದರೆ ಮೂಲಗಳ ಪ್ರಕಾರ ಮುಂಬೈ ದಾಳಿ ರೂವಾರಿಗಳ ವಿರುದ್ಧ ಮತ್ತಷ್ಟು ಕ್ರಮ ಕೈಗೊಳ್ಳುವ ಭರವಸೆಯನ್ನು ಪಾಕಿಸ್ತಾನ ಈ ಸಂದರ್ಭದಲ್ಲಿ ನೀಡಿದೆ.

ಅಮೆರಿಕಾ ವಶದಲ್ಲಿರುವ ಮುಂಬೈ ದಾಳಿ ಸಂಚು ರೂಪಿಸಿದ್ದ ಡೇವಿಡ್ ಕೋಲ್ಮನ್ ಹೆಡ್ಲಿ ಬಹಿರಂಗಪಡಿಸಿರುವ ಪಾಕಿಸ್ತಾನ ಮೂಲವನ್ನು ಕೂಡ ಮಾತುಕತೆಯಲ್ಲಿ ಪ್ರಸ್ತಾಪಿಸಲಾಗಿದೆ. ಉಳಿದಂತೆ ಸ್ವತಂತ್ರವಾಗಿ ತಿರುಗುತ್ತಿರುವ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಹಫೀಜ್ ಸಯೀದ್ ಸೇರಿದಂತೆ ಇತರ ರೂವಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತ ಒತ್ತಾಯಿಸಿದೆ. ಇದಕ್ಕೆ ಪಾಕ್ ಸಕಾರಾತ್ಮಕ ಸ್ಪಂದನೆ ನೀಡಿದೆ ಎಂದು ಹೇಳಲಾಗಿದೆ.

ಮಾತುಕತೆ ಸಂದರ್ಭದಲ್ಲಿ ಭಾರತದ ಪರವಾಗಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್, ವಿದೇಶಾಂಗ ಸಚಿವಾಲಯದ ಪಾಕಿಸ್ತಾನಕ್ಕಾಗಿನ ಜಂಟಿ ಕಾರ್ಯದರ್ಶಿ ಯಶ್ ಸಿನ್ಹಾ ಹಾಗೂ ಅತ್ತ ಪಾಕಿಸ್ತಾನದ ಕಡೆಯಿಂದ ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್, ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿತ್ ಹಾಜರಿದ್ದರು.

2008ರ ಮುಂಬೈ ದಾಳಿಯ ನಂತರ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ನಡೆಸುತ್ತಿರುವ ಎರಡನೇ ಮಾತುಕತೆಯಿದು. ಇದಕ್ಕಿಂತ ಮೊದಲು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನ್ಯೂಯಾರ್ಕ್‌ನಲ್ಲಿ ಇಬ್ಬರು ಸಚಿವರುಗಳು ಮುಖಾಮುಖಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ