95ಕ್ಕೂ ಹೆಚ್ಚು ವರ್ಷಗಳ ಕಾಲ ಸುಮಾರು 1,70,000 ಸಿಗರೇಟುಗಳನ್ನು ಸುಟ್ಟಿದ್ದ ಬ್ರಿಟನ್‌ನ 'ಹಿರಿಯ ಧೂಮಪಾನಿ' ಎಂಬ ಖ್ಯಾತಿಗೊಳಗಾಗಿದ್ದ ವೃದ್ಧೆಯೊಬ್ಬರು ತನ್ನ 103ನೇ ಹುಟ್ಟುಹಬ್ಬದ ಸನಿಹದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಮೊದಲನೇ ವಿಶ್ವಯುದ್ಧ ಆರಂಭವಾದ ಹೊತ್ತಿಗೆ ಏಳು ವರ್ಷದ ಬಾಲಕಿಯಾಗಿದ್ದ ವಿನ್ನಿ ಲಾಂಜ್ಲೇ ಎಂಬವರೇ ಇದೀಗ ಸಾವನ್ನಪ್ಪಿರುವ ಮುತ್ತಜ್ಜಿ. ಅಂದ ಹಾಗೆ ಅವರು ಸಾಯುವ ವರ್ಷದ ಮೊದಲೇ ಧೂಮಪಾನವನ್ನು ತ್ಯಜಿಸಿದ್ದರಂತೆ.
ತನ್ನ ಜೀವನದ 90ರ ಆಸುಪಾಸಿನಲ್ಲಿ ಕ್ಯಾನ್ಸರ್ ಅಂಟಿಸಿಕೊಂಡಿದ್ದ ಮುತ್ತಜ್ಜಿ 103ನೇ ಹುಟ್ಟುಹಬ್ಬಕ್ಕೆ ಇನ್ನೇನು ಸ್ವಲ್ಪ ದಿನವಷ್ಟೇ ಬಾಕಿ ಉಳಿದಿದೆ ಎನ್ನುವಾಗ ಇಹಲೋಕ ತ್ಯಜಿಸಿದ್ದಾರೆ ಎಂದು ಆಕೆಯ ಕುಟುಂಬ ಬಹಿರಂಗಪಡಿಸಿದೆ.
ತನ್ನ ಆಂಟಿ ಸಿಗರೇಟು ಸೇದುವುದು ಮತ್ತು ಮದ್ಯ ಸೇವಿಸುವುದನ್ನು ಇಷ್ಟಪಡುತ್ತಿದ್ದರು. ಆದರೂ ಅವರು ದಿನವೊಂದಕ್ಕೆ ಹೆಚ್ಚೆಂದರೆ ಐದು ಸಿಗರೇಟುಗಳನ್ನಷ್ಟೇ ಸೇದುತ್ತಿದ್ದರು. ಕಳೆದ ಕ್ರಿಸ್ಮಸ್‌ಗಿಂತ ಕೆಲವು ದಿನಗಳ ಹಿಂದಷ್ಟೇ ಅವರು ಇದನ್ನು ತ್ಯಜಿಸಿದ್ದರು ಎಂದು ಲಿಕಾಲ್ನ್‌ಶೈರ್ ನಿವಾಸಿ ಅನ್ನೆ ಗಿಬ್ಸ್ ಎಂಬವರು ಹೇಳಿದ್ದಾರೆಂದು 'ದಿ ಡೈಲಿ ಟೆಲಿಗ್ರಾಪ್' ವರದಿ ಮಾಡಿದೆ.
ತನ್ನ ನೂರನೇ ಹುಟ್ಟುಹಬ್ಬದಂದು ಸಿಗರೇಟಿಗೆ ಕ್ಯಾಂಡಲ್ ಮೂಲಕ ಕಿಡಿ ಹತ್ತಿಸುವ ಫೋಟೋ ತೆಗೆಸಿಕೊಂಡ ನಂತರ ಮಾತನಾಡಿದ್ದ ಮುತ್ತಜ್ಜಿ, ನಾನು ಶಾಲಾ ಬಾಲಕಿಯಾಗಿದ್ದಾಗಲೇ ಧೂಮಪಾನ ಆರಂಭಿಸಿದ್ದೆ ಮತ್ತು ಯಾವತ್ತೂ ಇದನ್ನು ತ್ಯಜಿಸಬೇಕೆಂದು ಯೋಚಿಸಿಲ್ಲ. ನಾನು ಸಿಗರೇಟು ಸೇದಲಾರಂಭಿಸಿದಾಗ ಈಗೆಲ್ಲ ಇರುವಂತೆ ಆರೋಗ್ಯದ ಕುರಿತು ಎಚ್ಚರಿಕೆಗಳನ್ನೂ ನೀಡುವವರು ಇರಲಿಲ್ಲ. ಹಾಗಾಗಿ ಇದೆಲ್ಲ ಸಾಧ್ಯವಾಯಿತು ಎಂದಿದ್ದರು.