ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭೀಕರ ಪ್ರವಾಹ; ಪಾಕಿಸ್ತಾನ ಸ್ವಾತಂತ್ರ್ಯ ಸಂಭ್ರಮ ರದ್ದು
(Pakistan's independence day | British colonial | Asif Ali Zardari | Pak flood)
ಭೀಕರ ಪ್ರವಾಹದಿಂದಾಗಿ ಸಾವನ್ನುಪ್ಪುತ್ತಿರುವವರ ಸಂಖ್ಯೆ ದಿನೇದಿನೇ ಭಾರೀ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಕಾರಣದಿಂದ ಪಾಕಿಸ್ತಾನವು ತನ್ನ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ರದ್ದುಪಡಿಸಿದೆ.
ಬ್ರಿಟೀಷ್ ವಸಾಹತುಶಾಹಿಯಿಂದ 1947ರ ಆಗಸ್ಟ್ 14ರಂದು ಮುಕ್ತಿ ಪಡೆದು ಸ್ವತಂತ್ರ ರಾಷ್ಟ್ರವಾಗಿದ್ದ ಪಾಕಿಸ್ತಾನವು ಇಂದು ಸ್ವಾತಂತ್ರ್ಯೋತ್ಸವ ಸಂಭ್ರಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಆದರೆ ನೆರೆಯು ದೇಶವನ್ನು ಭೀಕರವಾಗಿ ಕಾಡುತ್ತಿರುವುದರಿಂದ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಅಧ್ಯಕ್ಷ ಆಸಿಫ್ ಆಲಿ ಜರ್ದಾರಿಯವರ ವಕ್ತಾರರು ತಿಳಿಸಿದ್ದಾರೆ.
ಭಾರೀ ಪ್ರವಾಹದ ನಡುವೆಯೇ ಯೂರೋಪ್ ಪ್ರವಾಸ ಕೈಗೊಂಡು ನೆರೆ ಸಂತ್ರಸ್ತರು ಮತ್ತು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಜರ್ದಾರಿ ಈ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ.
ತನ್ನ ಅಧ್ಯಕ್ಷೀಯ ವ್ಯಾಪ್ತಿಯಲ್ಲಿ ಯಾವುದೇ ಸಮಾರಂಭಗಳನ್ನು ನಡೆಸದೇ ಇರಲು ಅಧ್ಯಕ್ಷರು ನಿರ್ಧರಿಸಿದ್ದಾರೆ ಎಂದು ಅವರ ವಕ್ತಾರ ಫರ್ಹಾತುಲ್ಲಾ ಬಾಬರ್ ವಿವರಣೆ ನೀಡಿದ್ದಾರೆ.
ಜನತೆ ತಾವೇ ಮುಂದಾಗಿ ಪ್ರವಾಹ ಸಂತ್ರಸ್ತರಿಗೆ ಸಹಕಾರ ನೀಡಬೇಕು ಎಂದು ಸ್ವಾತಂತ್ರ್ಯೋತ್ಸವ ದಿನ ಸಂದೇಶದಲ್ಲಿ ಪ್ರಜೆಗಳಿಗೆ ಅವರು ಕರೆ ನೀಡಿದ್ದಾರೆ.
ಪ್ರವಾಹದಿಂದ ಅತಿ ಹೆಚ್ಚು ಬಾಧೆಗೊಳಗಾಗಿರುವ ಸಿಂಧ್ ಪ್ರಾಂತ್ಯಕ್ಕೆ ಗುರುವಾರವಷ್ಟೇ ಅವರು ಭೇಟಿ ನೀಡಿ, ಸಾವಿನ ದವಡೆಯಿಂದ ಪಾರಾದವರನ್ನು ಮಾತನಾಡಿಸಿದ್ದರು.
ವಿಶ್ವಸಂಸ್ಥೆಯ ಪ್ರಕಾರ ಇದುವರೆಗೆ 1,600 ಮಂದಿ ಪ್ರಕೃತಿ ವಿಕೋಪಕ್ಕೆ ಬಲಿಯಾಗಿದ್ದಾರೆ. ಇಸ್ಲಾಮಾಬಾದ್ 1,343 ಮಂದಿ ಸಾವನ್ನಪ್ಪಿರುವುದನ್ನು ದೃಢಪಡಿಸಿದೆ.