ಪಾಕ್ ನೆರೆ ಸಂತ್ರಸ್ತರ ನಿರ್ಲಕ್ಷ್ಯ: ಸರಕಾರದ ವಿರುದ್ಧ ಪ್ರತಿಭಟನೆ
ಸುಕ್ಕುರ್, ಸೋಮವಾರ, 16 ಆಗಸ್ಟ್ 2010( 15:18 IST )
ನೆರೆ ಸಂತ್ರಸ್ತರಿಗೆ ನೀಡುತ್ತಿರುವ ಪರಿಹಾರ ವಿಳಂಬವಾಗುತ್ತಿರುವುದನ್ನು ಪ್ರತಿಭಟಿಸಿ ನೆರೆ ಸಂತ್ರತ್ತ ಜನರು ಸೋಮವಾರ ಪಾಕಿಸ್ತಾನ ಹೈವೇಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪಾಕಿಸ್ತಾನದ ಇತಿಹಾಸದಲ್ಲಿಯೇ ಕಂಡರಿಯದಂತಹ ಭಾರೀ ಮಳೆ ಮತ್ತು ಪ್ರವಾಹಕ್ಕೆ ಸುಮಾರು 20 ಮಿಲಿಯನ್‌ನಷ್ಟು ಜನರು ತತ್ತರಿಸಿಹೋಗಿದ್ದಾರೆ. ಅದಲ್ಲೂ ಪರ್ವತ ಪ್ರದೇಶಗಳ ವಾಯುವ್ಯ ಪ್ರಾಂತ್ಯದಲ್ಲಿ ಕಳೆದ ಎರಡು ವಾರಗಳ ಹಿಂದೆ ಸಂಭವಿಸಿದ್ದ ಪ್ರವಾಹ ಸಾಕಷ್ಟು ಅನಾಹುತ ಸೃಷ್ಟಿಸಿದೆ. ಸುಮಾರು 160,000 ಸ್ಕ್ವೇರ್ ಕಿಲೋ ಮೀಟರ್‌ನಷ್ಟು ಪ್ರದೇಶ ಪ್ರವಾಹಕ್ಕೆ ತುತ್ತಾಗಿದೆ.
ಆದರೆ ಪ್ರವಾಹ ಪೀಡಿತ ಸಂತ್ರಸ್ತರಿಗೆ ಸಕಾಲದಲ್ಲಿ ನೆರವು ಒದಗಿಸದ ಆಡಳಿತಾರೂಢ ಪಿಪಿಪಿ ಸರಕಾರದ ವಿರುದ್ಧ ಸುಮಾರು ನೂರಾರು ಸಂತ್ರಸ್ತರು ಇಲ್ಲಿನ ಸುಕ್ಕೂರ್ ಪ್ರದೇಶದಲ್ಲಿನ ಪ್ರಮುಖ ಹೈವೇ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ನೆರೆ ಸಂತ್ರಸ್ತರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಧ್ಯಮದವರು ಹಾಜರಾಗಿದ್ದ ವೇಳೆಯಲ್ಲಿ ಮಾತ್ರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಆಹಾರವನ್ನು ಕೊಟ್ಟು ಹೋಗಿದ್ದಾರೆ. ಅದನ್ನು ಬಿಟ್ಟರೆ ನಂತರ ಅವರ ಸುಳಿವೇ ಇಲ್ಲ ಎಂದು ಪ್ರತಿಭಟನಾಕಾರರಾದ ಕಾಲು ಮಾಂಗಿನಾಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ತುತ್ತು ಆಹಾರಕ್ಕಾಗಿ ಬಡಿದಾಡುತ್ತಿದ್ದರೆ, ಈ ಅಧಿಕಾರಿಗಳು ಆಹಾರದ ಪೊಟ್ಟಣವನ್ನು ನಾಯಿಗಳಿಗೆ ಬಿಸಾಕಿದ ಹಾಕಿ ಎಸೆದು ಹೋಗಿದ್ದಾರೆಂದು ಈ ಸಂದರ್ಭದಲ್ಲಿ ಕಿಡಿಕಾರಿದರು.