ಪ್ರೇಮಿಗಳನ್ನು ಕಲ್ಲು ಹೊಡೆದು ಸಾಯಿಸಿದ ತಾಲಿಬಾನ್ ಉಗ್ರರು!
ಕುಂದುಜ್, ಸೋಮವಾರ, 16 ಆಗಸ್ಟ್ 2010( 16:02 IST )
ಯುವಕ ಮತ್ತು ಯುವತಿ ಪ್ರೇಮಿಸುತ್ತಿದ್ದಾರೆಂಬ ಕಾರಣಕ್ಕೆ ಇಬ್ಬರನ್ನೂ ತಾಲಿಬಾನ್ ಉಗ್ರರು ಕಲ್ಲು ಹೊಡೆದು ಸಾಯಿಸಿರುವ ದಾರುಣ ಘಟನೆ ಉತ್ತರ ಅಫ್ಘಾನಿಸ್ತಾನದಲ್ಲಿ ನಡೆದಿರುವುದಾಗಿ ಪ್ರತ್ಯಕ್ಷದರ್ಶಿ ಹಾಗೂ ಅಧಿಕಾರಿಯೊಬ್ಬ ಸೋಮವಾರ ತಿಳಿಸಿದ್ದಾರೆ.
23ರ ಹರೆಯದ ಯುವತಿ ಮತ್ತು 28ರ ಹರೆಯದ ಯುವಕ ಪ್ರೇಮಿಸುತ್ತಿರುವ ವಿಷಯ ತಿಳಿದ ಪರಿಣಾಮ ಅವರಿಬ್ಬರನ್ನೂ ಕಲ್ಲು ಹೊಡೆದು ಸಾಯಿಸಲಾಯಿತು ಎಂದು ಕುಂದುಜ್ ಪ್ರಾಂತ್ಯದ ಮೊಹಮ್ಮದ್ ಅಯೊಬ್ ವಿವರಿಸಿದ್ದಾರೆ.
ತಾಲಿಬಾನ್ ಉಗ್ರರು ಪ್ರೇಮಿಗಳಿಬ್ಬರನ್ನೂ ಇಲ್ಲಿನ ಮುಲ್ಲಾ ಖ್ವಾಲಿ ಗ್ರಾಮದಲ್ಲಿ ಭಾನುವಾರ ಕಲ್ಲು ಹೊಡೆದು ಸಾಯಿಸಿದ್ದರು. ಈ ಪ್ರದೇಶ ತಾಲಿಬಾನ್ ಹಿಡಿತದಲ್ಲಿದೆ.
ಕಳೆದ ಸಂಜೆ ಸುಮಾರು ನೂರು ಮಂದಿಯಷ್ಟು ತಾಲಿಬಾನ್ ಬಂಡುಕೋರರು ಗ್ರಾಮಕ್ಕೆ ಆಗಮಿಸಿ, ಯುವಕ ಮತ್ತು ಯುವತಿ ತಾವು ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆಯೊಂದನ್ನು ತಾಲಿಬಾನ್ ಮುಖಂಡ ಓದಿ ಹೇಳಿದ್ದ. ನಂತರ ಯುವಕ ಈಗಾಗಲೇ ಮತ್ತೊಬ್ಬಾಕೆ ಜತೆ ಮದುವೆಯಾಗಿದ್ದ. ಇದೀಗ ಈ ಯುವತಿಯನ್ನು ತನ್ನ ಬಲೆಯೊಳಗೆ ಹಾಕಿಕೊಂಡಿದ್ದ ಎಂದು ಆತ ಆರೋಪಿಸಿರುವುದಾಗಿ ಮುಲ್ಲಾ ಖ್ವಾಲಿ ನಿವಾಸಿ ಅಬ್ದುಲ್ ಸತ್ತಾರ್ ತಿಳಿಸಿದ್ದಾನೆ.
ಹಾಗಾಗಿ ಅವರಿಬ್ಬರೂ ಆರೋಪಿಗಳಾಗಿದ್ದಾರೆ ಎಂದು ಘೋಷಿಸಿ ಕಲ್ಲು ಹೊಡೆದು ಸಾಯಿಸುವುದೇ ಇದಕ್ಕೆ ಶಿಕ್ಷೆ ಎಂದು ಫರ್ಮಾನು ಹೊರಡಿಸಿದ. ನಂತರ ಆ ಜೋಡಿಗಳು ಸಾಯುವವರೆಗೂ ನೆರೆದಿದ್ದ ಗುಂಪು ಕಲ್ಲು ಹೊಡೆಯಿತು ಎಂದು ಸತ್ತಾರ್ ವಿವರಿಸಿದ್ದಾನೆ.
ಪ್ರೇಮಿಗಳಿಬ್ಬರ ಕೈಯನ್ನು ಹಿಂದಕ್ಕೆ ಕಟ್ಟಿ ಬಲವಂತವಾಗಿ ಬಯಲು ಪ್ರದೇಶದಲ್ಲಿ ನಿಲ್ಲಿಸಿ ಕಲ್ಲು ಹೊಡೆಯಲು ತಾಲಿಬಾನ್ ಕಮಾಂಡರ್ ಆದೇಶ ನೀಡಿದ್ದ. ಈ ಘಟನೆಯ ಬಳಿಕ ಸ್ಥಳೀಯ ತಾಲಿಬಾನ್ ಕಮಾಂಡರ್ ಮಾಧ್ಯಮವೊಂದಕ್ಕೆ ಕರೆ ಮಾಡಿ ಪ್ರೇಮಿಗಳನ್ನು ಕಲ್ಲು ಹೊಡೆದು ಸಾಯಿಸಿರುವ ವಿಷಯವನ್ನು ಖಚಿತಪಡಿಸಿದ್ದ. ಇಬ್ಬರೂ ಪ್ರೇಮಿಸುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದರಿಂದ ಅವರನ್ನು ಕಲ್ಲು ಹೊಡೆದು ಸಾಯಿಸಲಾಯಿತು ಎಂದು ಮಾಧ್ಯಮಕ್ಕೆ ವಿವರಿಸಿದ್ದ. ಆದರೆ ಆತ ತನ್ನ ಹೆಸರನ್ನು ಹೇಳಲು ಮಾತ್ರ ನಿರಾಕರಿಸಿದ್ದ.
ಷರಿಯತ್ ಕಾನೂನಿನ ಪ್ರಕಾರ ಮದುವೆಯಾಗದ ವ್ಯಕ್ತಿಗಳು ನಡೆಸುವ ಲೈಂಗಿಕ ಚಟುವಟಿಕೆಗೆ ಸಾರ್ವಜನಿಕ ಥಳಿತ ಶಿಕ್ಷೆಯಾದರೆ, ಅನೈತಿಕ ಸಂಬಂಧ ಪ್ರಕರಣವಾದರೆ ಅಂತಹವರಿಗೆ ಕಲ್ಲು ಹೊಡೆದು ಸಾಯಿಸುವುದೇ ಶಿಕ್ಷೆಯಾಗಿದೆ ಎಂದು ಆತ ತಿಳಿಸಿದ್ದಾನೆ.