ಅಫಘಾನಿಸ್ತಾನದಲ್ಲಿ ಯುದ್ಧ ಆರಂಭವಾದ ಒಂಬತ್ತು ವರ್ಷಗಳಿಂದೀಚೆಗೆ ವಿದೇಶಿ ಸೇನೆಗಳ 2,000 ಯೋಧರು ಸಾವನ್ನಪ್ಪಿದ್ದಾರೆ ಎಂದು ಸ್ವತಂತ್ರ ವೆಬ್‌ಸೈಟ್ ಒಂದು ಹೇಳಿದೆ.
2001ರಲ್ಲಿ ಆರಂಭವಾದ ಅಮೆರಿಕಾ ನೇತೃತ್ವದ ಅಂತಾರಾಷ್ಟ್ರೀಯ ಮೈತ್ರಿಕೂಟ ಪಡೆಯು ಇದುವರೆಗೆ 2,002 ಸದಸ್ಯರನ್ನು ಅಫ್ಘಾನ್ ನೆಲದಲ್ಲಿ ಕಳೆದುಕೊಂಡಿದೆ. ಅದರಲ್ಲಿ 1,226 ಮಂದಿ ಅಮೆರಿಕನ್ನರು, 331 ಮಂದಿ ಬ್ರಿಟೀಷರು ಸೇರಿದ್ದಾರೆ.
ವೆಬ್‌ಸೈಟ್ ಪ್ರಕಾರ ಪ್ರಸಕ್ತ ವರ್ಷ ಇದುವರೆಗೆ ವಿದೇಶೀ ಪಡೆಗಳ 434 ಮಂದಿ ಯೋಧರು ಕೊಲ್ಲಲ್ಪಟ್ಟಿದ್ದಾರೆ. 2009ರಲ್ಲಿ 521 ಮಂದಿ ಈ ಹೊತ್ತಿಗೆ ಬಲಿಯಾಗಿದ್ದರು.
2001ರವರೆಗೆ ಅಫಘಾನಿಸ್ತಾನದಲ್ಲಿ ಅಸ್ತಿತ್ವದಲ್ಲಿದ್ದ ತಾಲಿಬಾನ್ ಸರಕಾರವನ್ನು ಉರುಳಿಸಿದ ಬಳಿಕ ಭಯೋತ್ಪಾದಕರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪ್ರಸಕ್ತ ಅಮೆರಿಕಾ ಮತ್ತು ನ್ಯಾಟೋ ನೇತೃತ್ವದ 1,40,000ಕ್ಕೂ ಹೆಚ್ಚು ಪಡೆಗಳು ಅಲ್ಲಿ ಕಾರ್ಯನಿರ್ವಹಿಸುತ್ತಿವೆ.
ಈ ವೆಬ್‌ಸೈಟ್ ನೀಡಿರುವ ವಿವರಣೆಗಳ ಪ್ರಕಾರ 2001ರಲ್ಲಿ 12, 2002ರಲ್ಲಿ 69, 2003ರಲ್ಲಿ 57, 2004ರಲ್ಲಿ 60, 2005ರಲ್ಲಿ 131, 2006ರಲ್ಲಿ 191, 2007ರಲ್ಲಿ 232, 2008ರಲ್ಲಿ 295, 2009ರಲ್ಲಿ 521 ಹಾಗೂ 2010ರಲ್ಲಿ 434 ಮಂದಿ ಯೋಧರು ಉಗ್ರರ ದಾಳಿಗೆ ಅಥವಾ ಇನ್ನಿತರ ಘಟನೆಗಳಿಂದ ಅಫಘಾನಿಸ್ತಾನದಲ್ಲಿ ಸಾವನ್ನಪ್ಪಿದ್ದಾರೆ.