ಕಳ್ಳತನಕ್ಕೆ ನವನವೀನ ವಿಧಾನಗಳು ಪರಿಚಯಿಸಲ್ಪಡುತ್ತಿವೆ. ಫ್ರಾನ್ಸ್‌ನ ಎಟಿಎಂ ಒಂದರಲ್ಲಿ ಹಣ ತೆಗೆಯಲೆಂದು ಹೋಗಿದ್ದ ಚಪಲ ಚೆನ್ನಿಗರಾಯನೊಬ್ಬ ಯುವತಿಯ ಬೆಡಗು-ಬಿನ್ನಾಣಗಳಿಗೆ ಮಾರು ಹೋಗಿ ಹಣ ಕಳೆದುಕೊಂಡು ಪರಿತಪಿಸುತ್ತಿದ್ದಾನೆ.
ಈ ಘಟನೆ ನಡೆದಿರುವುದು ಪ್ಯಾರಿಸ್‌ನಲ್ಲಿ. ಸುಮಾರು 20ರ ಆಸುಪಾಸಿನ ಇಬ್ಬರು ಯುವತಿಯರು ಇಂತಹ ಉಪಾಯವನ್ನು ಬಳಸಿ ಎಟಿಎಂನಿಂದ ಹಣ ಎಗರಿಸಿದ್ದಾರೆ.
ಎಟಿಎಂ ಕೇಂದ್ರಕ್ಕೆ ನುಗ್ಗಿ ಪಿನ್ ಕೋಡ್ ಹಾಕುತ್ತಿದ್ದಂತೆ ಹಣ ತೆಗೆಯಲೆಂದು ಬಂದವನ ಗಮನವನ್ನು ಯುವತಿಯೊಬ್ಬಳು ತನ್ನ ಮೇಲುಡುಗೆ ಕಳಚುವ ಮೂಲಕ ಸೆಳೆದಿದ್ದಳು. ಕಣ್ರೆಪ್ಪೆ ಮುಚ್ಚದೆ 'ಅದನ್ನೇ' ನೋಡುತ್ತಿದ್ದಾಗ, ಇತ್ತ ಮತ್ತೊಬ್ಬ ಯುವತಿ ಹಣ ಡ್ರಾ ಮಾಡಿದ್ದಾಳೆ. 300 ಯೂರೋಗಳನ್ನು (ಸುಮಾರ್ 18,000 ರೂಪಾಯಿ) ಎಗರಿಸಿದ ನಂತರ ಇಬ್ಬರೂ ಪರಾರಿಯಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಪ್ಯಾರಿಸ್ ಲೆಫ್ಟ್ ಬ್ಯಾಂಕ್ ಪ್ರದೇಶದಲ್ಲಿನ ಎಟಿಎಂ ಕೇಂದ್ರದಲ್ಲಿ ನಡೆದಿರುವ ಪ್ರಸಂಗ ಸಿಸಿಟಿವಿಯಲ್ಲೂ ದಾಖಲಾಗಿದೆ. ಆದರೆ ಯುವತಿಯರು ಯಾರೆಂಬುದನ್ನು ಪತ್ತೆ ಹಚ್ಚುವುದು ಸಾಧ್ಯವಿಲ್ಲ ಎಂದು ಪೊಲೀಸ್ ವಕ್ತಾರರೊಬ್ಬರು ಹೇಳಿದ್ದಾರೆ.
ದಯವಿಟ್ಟು ಹಣ ತೆಗೆಯುವಾಗ ನಿಮ್ಮ ಗಮನ ನೀವೇನು ಮಾಡುತ್ತಿದ್ದೀರಿ ಮತ್ತು ಮಾಡಬೇಕಿದೆ ಎಂಬುದರ ಕಡೆಗೆ ಮಾತ್ರವಿರಲಿ. ಆ ಹೊತ್ತಿನಲ್ಲಿ ಯಾರೇ ಅಪರಿಚಿತರು ಬಂದರೂ ವಿಕರ್ಷಣೆಗೊಳ್ಳದೆ, ನಿಮ್ಮ ಕೆಲಸವನ್ನು ಮುಂದುವರಿಸಿ ಎಂದು ಪೊಲೀಸರು ಸಲಹೆಯನ್ನೂ ನೀಡಿದ್ದಾರೆ.