ಅಫ್ಘಾನಿಸ್ತಾನದಲ್ಲಿ ಮಿಲಿಟರಿ ಕಾರ್ಯಾಚರಣೆ ವೇಳೆ ಸಂಭವಿಸಿದ ನಾಗರಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಮತ್ತು ಮಾನವ ಹಕ್ಕು ಸಂಘಟನೆ ಜಂಟಿಯಾಗಿ ತನಿಖೆ ನಡೆಸಬೇಕೆಂದು ತಾಲಿಬಾನ್ ಸಂಘಟನೆ ಒತ್ತಾಯಿಸಿದ್ದು, ಆ ನಿಟ್ಟಿನಲ್ಲಿ ತಾಲಿಬಾನ್ ಅಂತಾರಾಷ್ಟ್ರೀಯ ಪಡೆಗೆ ಸಹಕರಿಸಲು ಸಿದ್ದ ಎಂದು ತಿಳಿಸಿದೆ.
ಅಫ್ಘಾನಿಸ್ತಾನದಾದ್ಯಂತ ನಾಗರಿಕರ ಹತ್ಯೆ ನಡೆದಿರುವ ಸಂಗತಿ ತುಂಬಾ ಗಂಭೀರವಾದದ್ದು, ಆ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮತ್ತು ಮಾನವ ಹಕ್ಕು ಸಂಘಟನೆ ಜಂಟಿ ಸಮಿತಿ ತನಿಖೆ ನಡೆಸಬೇಕು ಎಂದು ತಾಲಿಬಾನ್ ಭಾನುವಾರ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ಹೇಳಿದೆ.
ಮಿಲಿಟರಿ ಕಾರ್ಯಾಚರಣೆ ವೇಳೆ ನೂರಾರು ನಾಗರಿಕರು ಸಾವನ್ನಪ್ಪಿದ್ದಾರೆ. ಅಲ್ಲದೇ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ನ್ಯಾಟೋ ಮತ್ತು ಅಮೆರಿಕ, ಅಫ್ಘಾನ್ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯಿಂದ ಈ ಘಟನೆ ಸಂಭವಿಸಿದೆ ಎಂದು ತಾಲಿಬಾನ್ ಕಿಡಿಕಾರಿದೆ.
2010ನೇ ಸಾಲಿನ ಆರು ತಿಂಗಳಲ್ಲಿಯೇ ನಾಗರಿಕರ ಸಾವಿನ ಸಂಖ್ಯೆ ಶೇ.31ರಷ್ಟಾಗಿದೆ ಎಂದು ಇತ್ತೀಚೆಗಷ್ಟೇ ವಿಶ್ವಸಂಸ್ಥೆ ತಿಳಿಸಿತ್ತು. ಅಷ್ಟೇ ಅಲ್ಲ ಮಕ್ಕಳ ಸಾವಿನ ಸಂಖ್ಯೆ ಶೇ.55ರಷ್ಟು ಎಂದು ಹೇಳಿತ್ತು. ಆ ನಿಟ್ಟಿನಲ್ಲಿ ಜಂಟಿ ತನಿಖೆ ಅಗತ್ಯ ಎಂದು ತಾಲಿಬಾನ್ ಒತ್ತಾಯಿಸಿದೆ.