ಕಳೆದ ವರ್ಷವಷ್ಟೇ ಮದುವೆಯಾಗಿದ್ದೇವೆ ಎಂಬ ಕುಖ್ಯಾತ ಕ್ರಿಮಿನಲ್ ಚಾರ್ಲ್ಸ್ ಶೋಭರಾಜ್ ಮತ್ತು ನೇಪಾಳಿ ಯುವತಿ ನಿಹಿತಾ ಬಿಸ್ವಾಸ್ ವಾದವನ್ನು ನೇಪಾಳ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಮದುವೆ ಸಂಬಂಧ ದಾಖಲೆಗಳನ್ನು ನೀಡಿ ಎಂದು ಅವರಿಗೆ ಹೇಳಿದೆ.
40 ವರ್ಷ ಹಳೆಯ ಕೊಲೆ ಪ್ರಕರಣವೊಂದರಲ್ಲಿ ಶೋಭರಾಜ್ ವಿರುದ್ಧ ತೀರ್ಪು ಬಂದಾಗ ನ್ಯಾಯಾಂಗ ವ್ಯವಸ್ಥೆ ವಿರುದ್ಧ ಕಿಡಿ ಕಾರಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೋರ್ಟ್ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ರೀತಿ ಹೇಳಲಾಗಿದೆ.
ಶೋಭರಾಜ್ ವಕೀಲೆಯೂ ಆಗಿರುವ ನಿಹಿತಾ ತಾಯಿ ಮತ್ತು ನಿಹಿತಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು, ಶೋಭರಾಜ್-ನಿಹಿತಾ ಪರಸ್ಪರ ಯಾವುದೇ ಸಂಬಂಧ ಹೊಂದಿಲ್ಲ, ಆತ ಫ್ರೆಂಚ್ ಪೌರ. ಅವರಿಬ್ಬರ ನಡುವೆ ಮದುವೆಯಾಗಿದೆ ಎಂಬ ಕುರಿತು ಯಾವುದೇ ದಾಖಲೆಗಳಿಲ್ಲ ಎಂದಿದೆ.
1975ರಲ್ಲಿ ಅಮೆರಿಕಾದ ಪ್ರವಾಸಿ ಕೋನಿ ಜೋ ಬ್ರೊಂಜಿಜ್ ಅವರನ್ನು ಹತ್ಯೆಗೈದುದಕ್ಕಾಗಿ ಶೋಭರಾಜ್‌ಗೆ 20 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದ ನಂತರ 2008ರಲ್ಲಿ ಕಾಠ್ಮಂಡುವಿನ ಕೇಂದ್ರೀಯ ಕಾರಾಗೃಹದಲ್ಲಿ ಶೋಭರಾಜ್‌ನನ್ನು ನಿಹಿತಾ ಭೇಟಿಯಾಗಿದ್ದಳು.
44 ವರ್ಷಗಳ ವಯಸ್ಸಿನ ಅಂತರ ಹೊಂದಿರುವ ಜೋಡಿ, ತಾವು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದೇವೆ ಮತ್ತು ಜೈಲು ಅಧಿಕಾರಿಗಳು, ಇತರ ಕೈದಿಗಳ ಎದುರೇ ತಾವು ಪ್ರಣಯ ನಡೆಸಿದ್ದೆವು ಎಂದು ಹೇಳಿಕೊಂಡಿತ್ತು.
ಕಳೆದ ವರ್ಷ 'ದಶೈನ್' ಹಬ್ಬದ ಸಂದರ್ಭದಲ್ಲಿ ಕೈದಿಗಳಿಗೆ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರನ್ನು ಜೈಲಿನ ಒಳಗೆ ಭೇಟಿ ಮಾಡಲು ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ತಾನು ಶೋಭರಾಜ್ ಜತೆ ನೇಪಾಳಿ ಸಂಪ್ರದಾಯದಂತೆ ಮದುವೆಯಾಗಿ ಆತನ ಪತ್ನಿಯಾಗಿದ್ದೇನೆ ಎಂದು ನಿಹಿತಾ ಹೇಳಿಕೊಂಡಿದ್ದಳು.
ಆ ಬಳಿಕ ತಾನು ಶೋಭರಾಜ್ ಪತ್ನಿಯೆಂದೇ ನಿಹಿತಾ ಗುರುತಿಸಿಕೊಂಡು ಬರುತ್ತಿದ್ದಾಳೆ. ಆದರೆ ಇದೀಗ ನ್ಯಾಯಾಲಯವು ಅವರ ಮದುವೆಯನ್ನು ಅನೂರ್ಜಿತ ಎಂದು ಸಾರಿದೆ.