ನ್ಯೂಯಾರ್ಕ್‌ನ ಮ್ಯಾನ್‌ಹಟ್ಟನ್‌ನಲ್ಲಿದ್ದ ವಿಶ್ವ ವಾಣಿಜ್ಯ ಕೇಂದ್ರದ ಜಾಗದಲ್ಲಿ ಮಸೀದಿ ನಿರ್ಮಿಸಬೇಕಾಗಿದೆ ಎಂದು ನಿಷೇಧಿತ ಭಯೋತ್ಪಾದಕ ಸಂಘಟನೆ ಹಮಾಸ್ ನಾಯಕ ಹೇಳಿಕೊಂಡಿದ್ದಾನೆ.
ಹಮಾಸ್ ನಾಯಕ ಮೊಹಮ್ಮದ್ ಅಲ್ ಜಹರ್ ಎಂಬಾತನೇ ಈ ಹೇಳಿಕೆ ನೀಡಿರುವುದು. ಮುಸ್ಲಿಮರು ಎಲ್ಲೆಡೆ ಮಸೀದಿಗಳನ್ನು ನಿರ್ಮಿಸಬೇಕಾಗಿದೆ. ಹಾಗೆ ಮಾಡಿದಲ್ಲಿ ಕ್ರಿಶ್ಚಿಯನ್ ಮತ್ತು ಜ್ಯೂಗಳಂತೆ ಇಸ್ಲಾಂ ಅನುಯಾಯಿಗಳಿಗೆ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದಿದ್ದಾನೆ.
'ವಿಎಬಿಸಿ-ಎಎಂ' ರೇಡಿಯೋ ಕಾರ್ಯಕ್ರಮದಲ್ಲಿ ಜಹರ್ ಈ ಹೇಳಿಕೆಯನ್ನು ನೀಡಿದ್ದಾನೆ. ಹಮಾಸ್ ಸಹ ಸಂಸ್ಥಾಪಕನಾಗಿರುವ ಈತ, ಗಾಜಾ ಪಟ್ಟಿಯಲ್ಲಿನ ಮುಖ್ಯಸ್ಥನೂ ಹೌದು.
ಆದರೆ ಇದಕ್ಕೆ ಅಮೆರಿಕಾ ಸೆನೆಟರ್ ಚಕ್ ಸ್ಚಮ್ಮರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಮಾಸ್ ಒಂದು ಭಯೋತ್ಪಾದನಾ ಸಂಘಟನೆಯಾಗಿರುವುದರಿಂದ ಜಹರ್ ನೀಡಿರುವ ಹೇಳಿಕೆಗೆ ಯಾವುದೇ ಮಹತ್ವ ನೀಡಬೇಕಾಗಿಲ್ಲ. ಮಸೀದಿ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಆತನಿಗಿಲ್ಲ ಎಂದಿದ್ದಾರೆ.
ಮಸೀದಿ ನಿರ್ಮಾಣವನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿರುವ ರಿಪಬ್ಲಿಕನ್ ಪೀಟರ್ ಕಿಂಗ್, ಹಮಾಸ್ ಹೇಳಿಕೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಇಸ್ಲಾಂ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ಸೌಹಾರ್ದಯುತ ಸಂಬಂಧ ಬೆಳೆಸುವ ನಿಟ್ಟಿನಲ್ಲಿ 'ಕೋರ್ದಬಾ ಇನೀಷಿಯೇಟಿವ್' ಎಂಬ ಸಂಘಟನೆಯೊಂದು ಮಸೀದಿ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ. ಆದರೆ ಪ್ರಸಕ್ತ ಹಮಾಸ್ ನೀಡಿರುವ ಹೇಳಿಕೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.