ಐದು ಯುವತಿಯರು ಹಾಗೂ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ 23ರ ಹರೆಯದ ಭಾರತೀಯ ಯುವಕನಿಗೆ ಇಲ್ಲಿನ ಸ್ಥಳೀಯ ಕೋರ್ಟ್ ಎಂಟು ವರ್ಷಗಳ ಜೈಲುಶಿಕ್ಷೆ ತೀರ್ಪು ನೀಡಿ, 12 ಛಡಿಯೇಡಿನ ಶಿಕ್ಷೆ ವಿಧಿಸಿದೆ.
ಸಿಂಗಾಪುರ್ನಲ್ಲಿ ತಮಿಳುನಾಡು ಮೂಲದ ವಲಸಿಗ ಕಟ್ಟಡ ನಿರ್ಮಾಣ ಕೆಲಸಗಾರನಾಗಿರುವ ತಂಗವೇಲು ತಮಿಳ್ಸೆಲ್ವಂ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡಿದ್ದು, ಆ ನಿಟ್ಟಿನಲ್ಲಿ ಶಿಕ್ಷೆ ವಿಧಿಸಲಾಗಿದೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ತಿಳಿಸಿದೆ.
ತಮಿಳ್ಸೆಲ್ವಂ ಸುಮಾರು 10ರಿಂದ 30 ವರ್ಷದೊಳಗಿನ ಐದು ಯುವತಿಯರು ಹಾಗೂ ಮಹಿಳೆಯ ಸ್ಕರ್ಟ್ಸ್ ಅನ್ನು ಎತ್ತಿ ಅಸಭ್ಯವಾಗಿ ವರ್ತಿಸಿದ್ದ. ಈ ಘಟನೆ ಕಳೆದ ವರ್ಷ ಮೇ ತಿಂಗಳಿನಲ್ಲಿ ನಡೆದಿತ್ತು.
ಅಷ್ಟೇ ಅಲ್ಲ ಸೆಲ್ವಂ ವುಡ್ಲ್ಯಾಂಡ್ಸ್ ಹೌಸಿಂಗ್ ಎಸ್ಟೇಟ್ನ ಅಪಾರ್ಟ್ಮೆಂಟ್ಸ್ ಲಿಫ್ಟ್ನಲ್ಲಿ ಯುವತಿಯರನ್ನು ಬಿಗಿದಪ್ಪಿ, ಮುತ್ತು ಕೊಟ್ಟಿರುವುದಾಗಿಯೂ ಡೆಪ್ಯುಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುಮಾರೆಸಾನ್ ಗೋಹುಲಾಬಾಲನ್ ಸೋಮವಾರ ಕೋರ್ಟ್ ವಿಚಾರಣೆ ವೇಳೆ ತಿಳಿಸಿದ್ದರು.