ಇಸ್ರೇಲ್ ಏರ್ ಫೋರ್ಸ್ ಅನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಅಮೆರಿಕ ನಿರ್ಮಿತ ವಿಶ್ವದ ಅತ್ಯಾಧುನಿಕ ಎಫ್-35 ಸ್ಟ್ರೈಕ್ ಫೈಟರ್ಸ್ಸ್ ವಿಮಾನ ಖರೀದಿಗೆ ಮುಂದಾಗಿರುವುದಾಗಿ ತಿಳಿಸಿದೆ.
ಆ ನಿಟ್ಟಿನಲ್ಲಿ ಇಸ್ರೇಲ್ ರಕ್ಷಣಾ ಸಚಿವ ಇಹುದ್ ಬರಾಕ್ ಅವರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ದೇಶದ ಮಿಲಿಟರಿ ಪಡೆಗಾಗಿ ಅಮೆರಿಕದ ಎಫ್-35 ಫೈಟರ್ಸ್ಸ್ ವಿಮಾನ ಖರೀದಿಗೆ ಮುಂದಾಗಿರುವುದಾಗಿ ರಕ್ಷಣಾ ಸಚಿವಾಲಯದ ಪ್ರಕಟಣೆ ಹೇಳಿದೆ.
ಅಮೆರಿಕದಿಂದ ಸುಮಾರು 20 ಅತ್ಯಾಧುನಿಕ ಎಫ್-35 ವಿಮಾನ ಖರೀದಿ ಮಾಡಲಾಗುವುದು, ಇದಕ್ಕೆ ಅಂದಾಜು ವೆಚ್ಚ 2.75 ಬಿಲಿಯನ್ ಡಾಲರ್ಸ್ ಆಗಲಿದೆ ಎಂದು ಅತ್ಯಧಿಕ ಪ್ರಸಾರ ಸಂಖ್ಯೆ ಹೊಂದಿರುವ ಯೆಡಿಯೋಟ್ ಅಹಾರೋನೊಟ್ ಡೈಲಿ ವರದಿ ವಿವರಿಸಿದೆ.
ವಿಮಾನ ಖರೀದಿಗೆ ರಕ್ಷಣಾ ಸಂಪುಟ ಅಂಕಿತ ಹಾಕಿದೆ. ಇದು ತುಂಬಾ ವೆಚ್ಚದಾಯಕ ಶಸ್ತ್ರಾಸ್ತ್ರ ಖರೀದಿ ಒಪ್ಪಂದವಾಗಿದೆ ಎಂದು ತಿಳಿಸಿದೆ. ಅಮೆರಿಕ ನಿರ್ಮಿತ ಅತ್ಯಾಧುನಿಕ ಎಫ್-35 ವಿಮಾನ ಕಡಿಮೆ ಮತ್ತು ದೀರ್ಘ ದೂರವನ್ನು ಕ್ರಮಿಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.