ಭಾರತದಲ್ಲಿನ ಭೋಪಾಲ್ ಅನಿಲ ದುರಂತ ಪ್ರಕರಣ ಇದೀಗ ಮುಗಿದ ಅಧ್ಯಾಯ ಎಂದು ಅಮೆರಿಕ ಗುರುವಾರ ಮತ್ತೊಮ್ಮೆ ಪುನರುಚ್ಚರಿಸಿದೆ.
ಭೋಪಾಲ್ ಅನಿಲ ದುರಂತ ಮುಗಿದ ಅಧ್ಯಾಯವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಪಿ.ಜೆ.ಕ್ರೌಲೆ, ಹೌದು ಎಂದು ಉತ್ತರಿಸಿದ್ದಾರೆ. ಅಲ್ಲದೇ, ಕಾನೂನುಬದ್ದವಾಗಿ ಭೋಪಾಲ್ ಅನಿಲ ದುರಂತ ಪ್ರಕರಣ ಮುಗಿದ ಅಧ್ಯಾಯವಾಗಿದೆ ಎಂದು ಸ್ಪಷ್ಟಪಡಿಸಿದರು.
1984ರ ಡಿಸೆಂಬರ್‌ನಲ್ಲಿ ಸಂಭವಿಸಿದ ಭೋಪಾಲ್‌ನಲ್ಲಿನ ಯೂನಿಯನ್ ಕಾರ್ಬೈಡ್ ಘಟಕದಿಂದ ಸೊರಿಕೆಯಾದ ಅನಿಲ ದುರಂತದಲ್ಲಿ ಸಾವಿರಾರು ಜನರು ಬಲಿಯಾಗಿದ್ದರು. ಅದರ ಪರಿಣಾಮ ಎಂಬಂತೆ ಈಗಲೂ ಭೋಪಾಲ್‌ನ ಜನರು ಅದರ ಪರಿಣಾಮವನ್ನು ಎದುರಿಸುತ್ತಿದ್ದಾರೆ.
ಭೋಪಾಲ್ ಅನಿಲ ದುರಂತ ಜಗತ್ತಿನ ಅತ್ಯಂತ ದೊಡ್ಡ ಕೈಗಾರಿಕ ದುರಂತವಾಗಿತ್ತು. ಈ ಬಗ್ಗೆ ಜಾಗತಿಕವಾಗಿ ಸಾಕಷ್ಟು ವಿವಾದ, ಟೀಕೆಗಳು ವ್ಯಕ್ತವಾಗಿದ್ದವು. ಅಂತೂ 1999ರಲ್ಲಿ ಅನಿಲ ದುರಂತಕ್ಕೆ ಯೂನಿಯನ್ ಕಾರ್ಬೈಡ್ ಕಂಪನಿ ಹೊಣೆ ಎಂದು ಘೋಷಿಸಲಾಯಿತು. 1984ರ ಭೋಪಾಲ್ ಅನಿಲ ದುರಂತ ಪ್ರಕರಣದ ವಿಚಾರಣೆ ಸುದೀರ್ಘ ಕಾಲ ನಡೆಯಿತು. 2010ರಲ್ಲಿ ನ್ಯಾಯಾಲಯ ಅಂತಿಮ ತೀರ್ಪು ನೀಡಿ ಯೂನಿಯನ್ ಕಾರ್ಬೈಡ್‌ನ ಭಾರತದ ಏಳು ಮಂದಿ ಮ್ಯಾನೇಜರ್‌ಗಳಿಗೆ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿತು.
ಆದರೆ ಕೋರ್ಟ್ ನೀಡಿದ್ದ ತೀರ್ಪಿನಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಆ ನಿಟ್ಟಿನಲ್ಲಿ ಯೂನಿಯನ್ ಕಾರ್ಬೈಡ್ ಮಾಜಿ ಮುಖ್ಯಸ್ಥ, ಘಟನೆಯ ಪ್ರಮುಖ ರೂವಾರಿ ವಾರೆನ್ ಆಂಡರ್ಸೆನ್‌ನನ್ನು ಭಾರತಕ್ಕೆ ವಾಪಸ್ ಕರೆಯಿಸಿ ವಿಚಾರಣೆ ನಡೆಸುವುದಾಗಿ ಭಾರತ ಭರವಸೆ ನೀಡಿತ್ತು. ಆದರೆ ಪ್ರಕರಣದ ಬಗ್ಗೆ ಅಮೆರಿಕ ಮುಗಿದ ಅಧ್ಯಾಯ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಮತ್ತು ಎಡಪಕ್ಷಗಳು ವಾರೆನ್‌ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಒತ್ತಡ ಹೇರಿ ಭೋಪಾಲ್ ದುರಂತದ ಸಂತ್ರಸ್ತ ಕುಟುಂಬಗಳಿಗೆ ನ್ಯಾಯಾ ಒದಗಿಸಿಕೊಡಬೇಕೆಂದು ಆಗ್ರಹಿಸಿವೆ.