ಭಾರತದ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ವಾರ್ಷಿಕ 250 ಮಿಲಿಯನ್ ಡಾಲರ್ ಹೆಚ್ಚುವರಿ ಹೊರೆಯಾಗಲಿರುವ ಎಚ್-1ಬಿ ಮತ್ತು ಎಲ್1 ವೀಸಾ ದರ ಏರಿಕೆ ಆಗಸ್ಟ್ 14ರಿಂದಲೇ ಜಾರಿಗೆ ಬರಲಿದೆ ಎಂದು ಅಮೆರಿಕಾ ಶುಕ್ರವಾರ ತಿಳಿಸಿದೆ.
ಭಾರತದ ತೀವ್ರ ಪ್ರತಿಭಟನೆಯ ನಡುವೆಯೇ ಅಮೆರಿಕಾ ತನ್ನ ನಿಲುವನ್ನು ಪ್ರಕಟಿಸಿದೆ. ಭಾರತದ ಕಂಪನಿಗಳ ಮೇಲೆ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದ್ದು, ಮಸೂದೆಯಲ್ಲಿ ತಿದ್ದುಪಡಿ ತರಬೇಕು ಎಂದು ಭಾರತ ಆಗ್ರಹಿಸಿತ್ತು.
ಅಮೆರಿಕಾ-ಮೆಕ್ಸಿಕೋ ಗಡಿ ಭಾಗದಲ್ಲಿ ರಕ್ಷಣೆಯನ್ನು ಬಿಗಿಗೊಳಿಸುವ ನಿರ್ದಿಷ್ಟ ಕ್ರಮಗಳನ್ನು ಒಳಗೊಂಡಿರುವ ಗಡಿ ಭದ್ರತಾ ಮಸೂದೆಗೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಸಹಿ ಹಾಕಿದ ನಂತರ ಇದು ಶನಿವಾರದಿಂದ ಜಾರಿಗೆ ಬರುತ್ತಿದೆ.
ಇನ್ನು ಎಚ್-1ಬಿ ವೀಸಾ ಅರ್ಜಿಯ ಮೇಲೆ 2,000 ಡಾಲರ್ ಮತ್ತು ಎಲ್-1ಎ ಮತ್ತು ಎಲ್-1ಬಿ ವೀಸಾ ಅರ್ಜಿಗಳ ಮೇಲೆ 2,250 ಡಾಲರುಗಳನ್ನು ಹೆಚ್ಚುವರಿಯಾಗಿ ವಿಧಿಸಲಾಗುತ್ತಿದ್ದು, ಇದು 2014ರ ಸೆಪ್ಟೆಂಬರ್ 30ರವರೆಗೆ ಯಾವುದೇ ಬದಲಾವಣೆಯಿಲ್ಲದೆ ಮುಂದುವರಿಯುತ್ತದೆ ಎಂದು ಅಮೆರಿಕಾ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆಯು ತಿಳಿಸಿದೆ.
ಎಚ್-1ಬಿ ಅಥವಾ ಎಲ್1 ವೀಸಾಗಳಡಿಯಲ್ಲಿ ಶೇ.50ಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಅಮೆರಿಕಾದಲ್ಲಿ ಹೊಂದಿರುವ ಮತ್ತು 50 ಮತ್ತು ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳ ಉದ್ಯೋಗಿಗಳ ವೀಸಾ ಅರ್ಜಿಗಳಿಗೆ ಈ ಹೆಚ್ಚುವರಿ ದರಗಳು ಅನ್ವಯವಾಗುತ್ತದೆ ಎಂದು ಅವರು ವಿವರಣೆ ನೀಡಿದ್ದಾರೆ.
ಈ ಮಸೂದೆಯಲ್ಲಿರುವ ಕೆಲವು ನಿಯಮಗಳ ಬಗ್ಗೆ ಭಾರತ ವ್ಯಕ್ತಪಡಿಸಿದ್ದ ಕಳವಳಗಳನ್ನು ನಿರ್ಲಕ್ಷಿಸಿದ್ದ ಅಮೆರಿಕಾ ಸೆನೆಟ್ ಕಳೆದ ವಾರ ಈ ಮಸೂದೆಯನ್ನು ಅಂಗೀಕರಿಸಿ, ಒಬಾಮಾ ಅವರ ಒಪ್ಪಿಗೆಗೆ ಕಳುಹಿಸಿತ್ತು.