ಬಾಂಗ್ಲಾದೇಶದ ಸಾರ್ವಜನಿಕ ಸ್ಥಳ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಮ್ ಯುವತಿಯರು, ಮಹಿಳೆಯರು ಬಲವಂತವಾಗಿ ಬುರ್ಖಾ ಅಥವಾ ಮುಖಗವಸು ಹಾಕಿಕೊಳ್ಳಲು ಒತ್ತಾಯಿಸಬಾರದು ಎಂದು ಬಾಂಗ್ಲಾ ಹೈಕೋರ್ಟ್ ಆದೇಶ ನೀಡಿರುವುದಾಗಿ ವಕೀಲರೊಬ್ಬರು ತಿಳಿಸಿದ್ದಾರೆ.
ಉತ್ತರ ಬಾಂಗ್ಲಾದೇಶದ ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಬಲವಂತವಾಗಿ ಬುರ್ಖಾ ಧರಿಸುವಂತೆ ಒತ್ತಾಯಿಸುತ್ತಿರುವ ಬಗ್ಗೆ ಅತ್ಯಧಿಕ ಪ್ರಸಾರ ಹೊಂದಿದ ಬಂಗಾಳಿ ದೈನಿಕವೊಂದರ ವರದಿಯನ್ನು ಆಧರಿಸಿ ಹೈಕೋರ್ಟ್ ಈ ಆದೇಶ ನೀಡಿದೆ.
'ವಿದ್ಯಾರ್ಥಿಗಳಾಗಲಿ ಅಥವಾ ನೌಕರರಾಗಲಿ ಬುರ್ಖಾವನ್ನು ಧರಿಸುವುದು, ಬಿಡುವುದು ಅವರಿಗೆ ಬಿಟ್ಟ ವೈಯಕ್ತಿಕ ವಿಚಾರವಾಗಿದೆ. ಇದರಲ್ಲಿ ಯಾವುದೇ ರೀತಿಯ ಬಲವಂತ ಹೇರುವಂತಿಲ್ಲ' ಎಂದು ಹೈಕೋರ್ಟ್ ನ್ಯಾಯಾಧೀಶರು ನೀಡಿರುವ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಬುರ್ಖಾ ಧರಿಸಲೇಬೇಕೆಂದು ಯಾರೊಬ್ಬರು ಬಲವಂತ ಮಾಡುವಂತಿಲ್ಲ ಎಂದು ಬ್ಯಾರಿಸ್ಟರ್ ಮಹಬೂಬ್ ಶಾಫಿಖ್ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಬಲವಂತವಾಗಿ ಬುರ್ಖಾ ಧರಿಸುವಂತೆ ಒತ್ತಾಯಿಸುತ್ತಿರುವ ಕೆಲವು ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಹಾಗಾಗಿ ಇನ್ಮುಂದೆ ಯಾವುದೇ ಶಾಲೆಗಳಲ್ಲಿ ಆ ರೀತಿಯ ಒತ್ತಡ ಹೇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳಿಗೂ ಬಲವಂತವಾಗಿ ಬುರ್ಖಾ ತೊಡುವಂತೆ ಒತ್ತಾಯಿಸುವಂತಿಲ್ಲ ಎಂದು ಕಳೆದ ಏಪ್ರಿಲ್ ತಿಂಗಳಿನಲ್ಲಿ ಹೈಕೋರ್ಟ್ ಆದೇಶ ನೀಡಿತ್ತು. ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ಸರಕಾರಿ ಅಧಿಕಾರಿಗಳು ಕಿರುಕುಳ ನೀಡಿ ಥಳಿಸಿದ್ದರ ಪರಿಣಾಮ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ ಸಂದರ್ಭದಲ್ಲಿ ಈ ಆದೇಶ ನೀಡಿತ್ತು.