ಪ್ರವಾಹದಿಂದಾಗಿ ಮನೆ-ಮಠ ಕಳೆದುಕೊಂಡು ನಿರಾಶ್ರಿತರ ಶಿಬಿರದಲ್ಲಿ ವಾಸವಾಗಿದ್ದ ನೂರಾರು ಹಿಂದೂಗಳಿಗೆ ಪಾಕಿಸ್ತಾನದ ಅಧಿಕಾರಿಗಳು ದನದ ಮಾಂಸವನ್ನು ನೀಡಿರುವುದಕ್ಕೆ ಹಿಂದೂ ಸಮುದಾಯ ತೀವ್ರ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ನೆರೆಯಿಂದಾಗಿ ಮನೆ ಕಳೆದುಕೊಂಡಿರುವ ವಿವಿಧ ಧರ್ಮಕ್ಕೆ ಸೇರಿರುವ ಸುಮಾರು ನಾಲ್ಕು ಸಾವಿರ ನಿರಾಶ್ರಿತರು ಇಲ್ಲಿನ ಲೈರಿ ಪ್ರದೇಶದ ತಾತ್ಕಾಲಿಕ ಶಿಬಿರದಲ್ಲಿ ವಾಸವಾಗಿದ್ದಾರೆ. ಅದರಲ್ಲಿ 600 ಮಂದಿ ಹಿಂದೂಗಳು ಸೇರಿದ್ದಾರೆ.
ಹಿಂದೂಗಳಿಗೆ ಗೋವು ಪವಿತ್ರವಾದದ್ದು, ಗೋ ಮಾಂಸ ಭಕ್ಷಣೆ ಹಿಂದೂಗಳಿಗೆ ನಿಷಿದ್ದ. ಆದರೂ ಕೂಡ ನಮಗೆ ದನದ ಮಾಂಸವನ್ನು ನೀಡಲಾಗಿದೆ. ಇದನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಶಿಬಿರದಲ್ಲಿ ವಾಸವಾಗಿದ್ದ ಹಿಂದೂ ಯುವಕ ಮೋಹನ್ ಬಾಗ್ರಿ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾನೆ.
ಆ ನಿಟ್ಟಿನಲ್ಲಿ ತಮ್ಮನ್ನು ಬೇರೆ ಶಿಬಿರಕ್ಕೆ ಸ್ಥಳಾಂತರಿಸುವಂತೆ ಶಿಬಿರದಲ್ಲಿರುವ ಬುಡಕಟ್ಟು ಜನಾಂಗದ ಹಿಂದೂಗಳು ಒತ್ತಾಯಿಸಿದ್ದಾರೆ. ಆದರೆ ದನದ ಮಾಂಸವನ್ನು ನೀಡಿರುವುದಕ್ಕೆ ಪ್ರತಿಭಟನೆ ನಡೆಸಿರುವ ವಿಷಯ ತಿಳಿದ ಸಿಂಧ್ ಪ್ರಾಂತ್ಯದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಶಿಬಿರಕ್ಕೆ ಭೇಟಿ ನೀಡಿ ವಿವರಣೆ ಪಡೆದು ಸಮಸ್ಯೆಯನ್ನು ಬಗೆಹರಿಸಿದರು.
ಇದೊಂದು ತಪ್ಪುಗ್ರಹಿಕೆಯಿಂದಾದ ಪ್ರಮಾದ, ಉದ್ದೇಶಪೂರ್ವಕವಾಗಿ ಹಿಂದೂಗಳಿಗೆ ದನದ ಮಾಂಸ ಕೊಟ್ಟಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿ, ಬೇರೆ ಆಹಾರದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.