ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ಜಾರಿಯಾಗುವ ಸಂಭವವನ್ನು ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ತಳ್ಳಿಹಾಕಿದ್ದಾರೆ. ಆದರೆ ದೇಶದಲ್ಲಿ ಮಿಲಿಟರಿ ಆಡಳಿತ ಜಾರಿ ಮಾಡುವ ಮಹತ್ವಾಕಾಂಕ್ಷೆಯ ಚಿಂತನೆಯೊಂದು ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತದ ಹೊಣೆಗಾರಿಕೆ ಹೊತ್ತುಕೊಳ್ಳುವವರು ಸದ್ಯದ ಸ್ಥಿತಿಯಲ್ಲಿ ಯಾರೂ ಇಲ್ಲ. ನಮ್ಮದು ಪ್ರಜಾಪ್ರಭುತ್ವ ದೇಶವಾಗಿದೆ ಎಂದು ಇಸ್ಲಾಮಾಬಾದ್‌ನಲ್ಲಿ ವಿದೇಶಿ ಪತ್ರಕರ್ತರ ಜತೆ ಮಾತನಾಡುತ್ತ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಭ್ರಷ್ಟ ರಾಜಕಾರಣಿಗಳು ಮತ್ತು ಊಳಿಗಮಾನ್ಯ ಧಣಿಗಳ ವಿರುದ್ಧ ಸೆಟೆದು ಯಾವುದೇ ಮಾರ್ಷಲ್ ಕಾನೂನು ಪ್ರಕಾರದ ಆಡಳಿತ ನಡೆಸಲು ತಮ್ಮ ಸಂಘಟನೆ ಬೆಂಬಲ ನೀಡುವುದಾಗಿ ಎಂಕ್ಯೂಎಂ ವರಿಷ್ಠ ಅಲ್ತಾಫ್ ಹುಸೈನ್ ಹೇಳಿಕೆಯ ಕುರಿತಾಗಿ ಸುದ್ದಿಗಾರರು ಪ್ರಶ್ನಿಸಿದಾಗ ಜರ್ದಾರಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಅಲ್ಲದೆ, ದೇಶದಲ್ಲಿ ತಲೆದೋರಿದ ಪ್ರವಾಹದಿಂದ ಉಂಟಾದ ಸಂಕಷ್ಟಗಳನ್ನು ಪರಿಹರಿಸಿ, ನೆರೆ ಸಂತ್ರಸ್ತರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಸುಮಾರು ಮೂರು ವರ್ಷಗಳ ಕಾಲಾವಧಿ ಬೇಕಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.