ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಸೋಮವಾರದ ನಡೆದ ಒತ್ತೆ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೇರಿದೆ ಎಂದು ವರದಿಗಳು ಹೇಳಿವೆ.
ಮಾಜಿ ಪೊಲೀಸ್ ಅಧಿಕಾರಿ ರೊನಾಲ್ಡೋ ಮೆಂಡೋಜಾ ಎಂಬಾತ ಸರಕಾರಿ ವಿರೋಧಿ ನೀತಿಯನ್ನು ಪ್ರತಿಭಟಿಸುವ ಸಲುವಾಗಿ ಪ್ರಯಾಣಿಕರ ಬಸ್ಸೊಂದನ್ನು ಒತ್ತೆಯಾಗಿಟ್ಟುಕೊಂಡಿದ್ದ. ನಂತರ ಆತನನ್ನು ಕೊಂದು, ಪ್ರಯಾಣಿಕರನ್ನು ಭದ್ರತಾ ಪಡೆಗಳು ಬಿಡಿಸಿಕೊಂಡಿದ್ದವು.
ಸಾನ್ ಜುವಾನ್ ಡೇ ಡಯಾಸ್ ಆಸ್ಪತ್ರೆಯಲ್ಲಿ ಓರ್ವ ಮಹಿಳೆ, ಓಸ್ಪಿಟಲ್ ನೆಗ್ ಮನಿಲಾದಲ್ಲಿ ಮೂವರು, ಮನಿಲಾ ಡಾಕ್ಟರ್ಸ್ ಹಾಸ್ಪಿಟಲ್‌ನಲ್ಲಿ ನಾಲ್ವರು ಹಾಗೂ ಫಿಲಿಪೈನ್ ಜನರಲ್ ಆಸ್ಪತ್ರೆಯಲ್ಲಿ ಓರ್ವ ಸಾವನ್ನಪ್ಪುವುದರೊಂದಿಗೆ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೇರಿದೆ.
ಇಲ್ಲಿ ಹತ್ತನೇ ಬಲಿ ಸ್ವತಃ ಒತ್ತೆ ಪ್ರಕರಣದ ಆರೋಪಿ, ವಜಾಗೊಂಡಿದ್ದ ಮಾಜಿ ಪೊಲೀಸ್ ಅಧಿಕಾರಿ ಮೆಂಡೋಜಾ.
ಅತ್ತ ಮತ್ತೊಂದು ಕಡೆ ಇತರ ಆರು ಮಂದಿ ಒತ್ತೆಯಾಳುಗಳಿಗೆ ಮನಿಲಾದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯನ್ನು ರಾಷ್ಟ್ರೀಯ ದುರಂತ ಎಂದು ಪರಿಗಣಿಸಲಾಗಿದೆ. ಅತ್ತ ಹಾಂಕಾಂಗ್ ವಿಶೇಷಾಡಳಿತ ಹೊಂದಿರುವ ಪ್ರಾಂತ್ಯದಲ್ಲಿನ ಎಲ್ಲಾ ಸರಕಾರಿ ಕಚೇರಿಗಳಲ್ಲೂ ರಾಷ್ಟ್ರಧ್ವಜವನ್ನು ಅರ್ಧದವರೆಗೆ ಇಳಿಸಿ ಸಾವನ್ನಪ್ಪಿದ ಹಾಂಕಾಂಗ್ ಪ್ರವಾಸಿಗಳಿಗೆ ಗೌರವ ಸೂಚಿಸಲಾಯಿತು.
ಚೀನಾ ಸರಕಾರವೂ ಫಿಲಿಪೈನ್ಸ್ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ತನ್ನ ದೇಶದ ಪ್ರವಾಸಿಗರನ್ನು ಮಾಜಿ ಪೊಲೀಸ್ ಅಧಿಕಾರಿಯೊಬ್ಬ ಒತ್ತೆಯಾಗಿಟ್ಟುಕೊಂಡು ಹಲವರ ಸಾವಿಗೆ ಕಾರಣವಾದ ಘಟನೆಯನ್ನು ತನಿಖೆಗೊಳಪಡಿಸಬೇಕು ಎಂದು ಚೀನಾ ಆಗ್ರಹಿಸಿದೆ.