ನೇಪಾಳದ ಪರ್ವತ ಪ್ರದೇಶದ ಸಮೀಪ ಅಗ್ನಿ ಲಘು ವಿಮಾನ ದುರಂತಕ್ಕೀಡಾದ ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದರು. ಆದರೆ ಪ್ರವಾಸಿ ಮಹಿಳೆಯೊಬ್ಬರು ಟಿಕೆಟ್ ಮಾಡಿದ್ದರೂ ಕೂಡ ಆಕಸ್ಮಿಕವಾಗಿ ವಿಮಾನದಲ್ಲಿ ಪ್ರಯಾಣಿಸದ ಪರಿಣಾಮ ತಾನು ಜೀವ ಸಹಿತ ಉಳಿದಿರುವುದಾಗಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಲುಕ್ಲಾದಿಂದ ಹೊರಟ ಅಗ್ನಿ ವಿಮಾನದಲ್ಲಿ ಮಂಗಳವಾರ ಪ್ರಯಾಣಿಸಲು ಪ್ರವಾಸಿ ಇ ವೋಲ್ಸ್ ಎಂಬ ಮಹಿಳೆ ಟಿಕೆಟ್ ಬುಕ್ ಮಾಡಿದ್ದರು. ಆದರೆ ಆ ದಿನ 7ಗಂಟೆ 4ನಿಮಿಷಕ್ಕೆ ಹೊರಟ ವಿಮಾನದಲ್ಲಿ ಅವರು ಪ್ರಯಾಣಿಸಲು ಆಗಿಲ್ಲವಾಗಿತ್ತು. ಆಕೆಯ ಅದೃಷ್ಟ ಚೆನ್ನಾಗಿತ್ತು. ಯಾಕೆಂದರೆ ನೇಪಾಳದಿಂದ ಕೆಲವು ದೂರದ ಅಂತರದಲ್ಲಿ ವಿಮಾನ ದುರಂತಕ್ಕೀಡಾಗಿ ವಿಮಾನದಲ್ಲಿದ್ದ 14 ಮಂದಿಯೂ ಸಾವನ್ನಪ್ಪಿದ್ದರು.
ತಾನು ವಿಮಾನದಲ್ಲಿ ಪ್ರಯಾಣಿಸದೆ ಬದುಕಿರುವುದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ವೋಲ್ಸ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಮಾಕ್ವಾನ್‌ಪುರ್ ಗ್ರಾಮದ ಸಮೀಪದ ದುರ್ಗಮ ಪ್ರದೇಶದಲ್ಲಿ ವಿಮಾನ ದುರಂತಕ್ಕೀಡಾಗಿತ್ತು. ಪ್ರಯಾಣಿಕರ ದೇಹ ಸುಟ್ಟು ಕರಕಲಾಗಿ ಹೋಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಘಟನೆ ನಡೆದ ಕೆಲವು ಹೊತ್ತಿನ ನಂತರ ಮಿಲಿಟರಿ ಪಡೆ ಹೆಲಿಕಾಪ್ಟರ್ ಮೂಲಕ ತೆರಳಿ ಮೃತದೇಹಗಳನ್ನು ಪತ್ತೆ ಹಚ್ಚಿದ್ದರು.