ಖಗೋಳ ವಿಜ್ಞಾನಿಗಳ ಎಷ್ಟೋ ವರ್ಷಗಳ ತಪಸ್ಸು ಈಗ ಫಲಿಸಿದ್ದು, ನಕ್ಷತ್ರ ಶೋಧ ಪ್ರಯೋಗದಲ್ಲಿ ಹೊಸ ಯುಗವನ್ನೇ ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಖಗೋಳ ವಿಜ್ಞಾನಿಗಳ ತಂಡವೊಂದು ದೈತ್ಯ ಸೌರಮಂಡಲವೊಂದನ್ನು ಪತ್ತೆ ಹಚ್ಚಿದ್ದು, ಇದು ಭೂಮಿಯಿಂದ ಅಂದಾಜು 127 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ.
ಹೌದು. ಖಗೋಳ ವಿಜ್ಞಾನಿಗಳ ಲೆಕ್ಕಾಚಾರ ಇದೀಗ ನಿಜವಾಗಿದೆ. ಸೂರ್ಯನಂತೆ ಇರುವ ನಕ್ಷತ್ರವೊಂದರ ಸುತ್ತ ಸುತ್ತುವ ಗ್ರಹಗಳಿರುವ ಸೌರಮಂಡಲ ಖಂಡಿತವಾಗಿಯೂ ಇರಬಹುದು ಎಂಬ ಲೆಕ್ಕಾಚಾರದಡಿ ಆರು ವರ್ಷಗಳ ಕಾಲ ಮಾಡಿದ ಹಗಲಿರುಳಿನ ಸಂಶೋಧನೆ, ವೀಕ್ಷಣೆ ಇದೀಗ ಫಲ ತಂದಿದೆ. ಆಕಾಶದ ದಕ್ಷಿಣ ಭಾಗದಲ್ಲಿ ಈ ಸೌರಮಂಡಲವಿದೆ.
ಈ ಸೌರಮಂಡಲ ಅತ್ಯಂತ ದೊಡ್ಡದಾಗಿದ್ದು, ಇದು ಭೂಮಿಯಿಂದ 127 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವುದು ಪತ್ತೆಯಾಗಿದೆ. ಅದರಲ್ಲಿ ಮೂಲ ನಕ್ಷತ್ರ (ಸೂರ್ಯನಂತೆ) ಸುತ್ತಲೂ ನಿಯಮಿತ ದೂರದಲ್ಲಿ ಈಗಾಗಲೇ ಐದು ಗ್ರಹಗಳು ನಿಖರವಾಗಿ ಪತ್ತೆ ಮಾಡಲಾಗಿದ್ದು, ಇನ್ನೂ ಹೆಚ್ಚಿನ ಗ್ರಹಗಳಿರುವ ಸಾಧ್ಯತೆಗಳೂ ಇವೆ. ಆ ಬಗ್ಗೆ ಸಂಶೋಧನೆ ಮಂದುವರಿಸುತ್ತೇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಎಂದು ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.