ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಜೈಶ್ ಇ ಮುಹಮ್ಮದ್ ಮತ್ತು ಸಿಫಾ ಇ ಸಾಹಾಬಾ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧಿಸಲ್ಪಟ್ಟ ಶಂಕಿತ 390 ಜನರನ್ನು ಶೀಘ್ರದಲ್ಲೇ ಪಾಕಿಸ್ತಾನ ಅಧಿಕಾರಿಗಳು ಬಂಧಮುಕ್ತಗೊಳಿಸಲಿದ್ದಾರೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಶಂಕಿತ ಆರೋಪದ ಮೇಲೆ ಬಂಧಿಸಲ್ಪಟ್ಟವರನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಪಂಜಾಬ್ ಪ್ರಾಂತ್ಯದ ಗೃಹ ಮತ್ತು ಜೈಲಿನ ಅಧಿಕಾರಿಗಳು ತಿಳಿಸಿರುವುದಾಗಿ ಡೈಲಿ ಟೈಮ್ಸ್ ವರದಿ ಹೇಳಿದೆ.
ಬಂಧಿಸಲ್ಪಟ್ಟವರ ಮೇಲೆ ಯಾವುದೇ ಒಂದೂ ದೂರು ಕೂಡ ದಾಖಲಾಗಿಲ್ಲ ಎಂದು ತಿಳಿಸಿರುವ ಅಧಿಕಾರಿಗಳು, ಹಾಗಾಗಿ ಅವರನ್ನು ಬಿಡುಗಡೆ ಮಾಡಬಹುದು ಎಂದು ಗುಪ್ತಚರ ಇಲಾಖೆ ವರದಿಯನ್ನು ಸರಕಾರಕ್ಕೆ ರವಾನಿಸಿದೆ.
ಸಿಫಾ ಇ ಸಾಹಾಬಾ, ಲಷ್ಕರ್ ಇ ಜಾಂಘ್ವಿ, ಜೈಶ್ ಇ ಮುಹಮ್ಮದ್, ಹರ್ಕತ್ ಉಲ್ ಇಸ್ಲಾಮಿ, ಅಲ್ ಅನ್ಸಾರ್ ಟ್ರಸ್ಟ್, ಜಮಾತುಲ್ ಫರ್ಖಾನ್ ಮತ್ತು ಇನ್ನಿತರ ಕೆಲವು ನಿಷೇಧಿತ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಾರೆಂಬ ಮೇಲೆ 390 ಮಂದಿಯನ್ನು ಬಂಧಿಸಲಾಗಿತ್ತು.