ವಾಷಿಂಗ್ಟನ್, ಶುಕ್ರವಾರ, 3 ಸೆಪ್ಟೆಂಬರ್ 2010( 12:30 IST )
ಅಫ್ಘಾನಿಸ್ತಾನದ ದಕ್ಷಿಣ ಭಾಗದ ಮಾರ್ಜಾದಲ್ಲಿ ಠಿಕಾಣಿ ಹೂಡಿ ಕಾರ್ಯಾಚರಿಸುತ್ತಿರುವ ತಾಲಿಬಾನ್ ಉಗ್ರಗಾಮಿ ಸಂಘಟನೆ ತೀವ್ರವಾಗಿ ಹಣಕಾಸಿನ ಮುಗ್ಗಟ್ಟಿಗೆ ಒಳಗಾಗಿರುವುದಾಗಿ ಅಮೆರಿಕದ ಜನರಲ್‌ವೊಬ್ಬರು ತಿಳಿಸಿದ್ದಾರೆ.
'ತಾಲಿಬಾನ್ ಸಂಘಟನೆ ಆರ್ಥಿಕ ಹೊಡೆತದಿಂದ ಬಳಲುತ್ತಿದೆ ಎಂಬ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿ ನಮಗೆ ಆ ಸೂಚನೆಯನ್ನು ಕೊಟ್ಟಿದೆ' ಎಂದು ಮೇಜರ್ ಜನರಲ್ ರಿಚರ್ಡ್ ಮಿಲ್ಸ್ ಅವರು ಪೆಂಟಗಾನ್ ಪ್ರೆಸ್ ರೂಮ್‌ನಲ್ಲಿ ವೀಡಿಯೋ ಕಾನ್ಫರೆನ್ಸ್‌ನಲ್ಲಿ ವಿವರಿಸಿದ್ದಾರೆ.
ತಮ್ಮ ಸಂಘಟನೆ ಬಲಪಡಿಸಲು ಅಫೀಮು ಬೆಳೆ ಹಾಗೂ ವಿವಿಧ ಮೂಲಗಳಿಂದ ಹಣ ದೋಚುತ್ತಿದ್ದ ತಾಲಿಬಾನ್ ಈಗ ಹಣಕಾಸಿನ ಕೊರತೆಯಿಂದ ಪೇಚಿಗೆ ಸಿಲುಕಿದೆ ಎಂದು ತಿಳಿಸಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಗುಪ್ತಚರ ಇಲಾಖೆ ಸೂಕ್ಷ್ಮವಾಗಿ ಕಲೆ ಹಾಕಿದೆ. ಆದರೆ ತಾಲಿಬಾನ್‌ಗೆ ಶಸ್ತ್ರಾಸ್ತ್ರ ಖರೀದಿಸಲು ಹಣಕಾಸಿನ ಅಗತ್ಯವಿಲ್ಲ. ಈಗಾಗಲೇ ತಾಲಿಬಾನ್ ಬಳಿ ಸಾಕಷ್ಟು ಶಸ್ತ್ರಾಸ್ತ್ರ ಇರುವುದರಿಂದ ಸಮರವನ್ನು ಮುಂದುವರಿಸಿದೆ.
ಹಾಗಾಗಿ ಹೆಚ್ಚಿನ ಹಣಕಾಸಿನ ವೆಚ್ಚಿವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಾಲಿಬಾನ್ ಉಗ್ರರು ಆ ಭಾಗದಲ್ಲಿ ಐಇಡಿಎಸ್ ಬಳಸುವ ಬದಲು ಸಾಧಾರಣ ಗನ್ ಮೂಲಕ ಯುದ್ಧ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.